ಶ್ವಾಸ ಸಂಧಿ
29 verses
ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು|| ಭಾರತೀಶನು ಘಳಿಗೆಯೊಳು ಮುನ್ನೂರ ಅರವತ್ತು ಸುರ ಜಪಗಳ ತಾ ರಚಿಸುವನು ಸರ್ವ ಜೀವರೊಳಿದ್ದು ಬೇಸರದೆ ಕಾರುಣಿಕ ಅವರವರ ಸಾಧನ ಪೂರೈಸಿ ಭೂ ಸ್ವರ್ಗ ನರಕವ ಸೇರಿಸುವ ಸರ್ವಜ್ಞ ಸಕಲೇಷ್ಟ ಪ್ರದಾಯಕನು||1|| ತಾಸಿಗೆ ಒಂಭೈನೂರು ಶ್ವಾಸೋಚ್ಚಾಸಗಳ ನಡೆಸುತಲಿ ಚೇತನ ರಾಶಿಯೊಳು ಹಗಲಿರುಳು ಜಾಗೃತನಾಗಿ ನಿತ್ಯದಲಿ ಈ ಸುಮನಸೋತ್ತಂಸ ಲೇಶ ಆಯಾಸವಿಲ್ಲದೆ ಪೋಷಿಸುತ ಮೂಲೇಶನ ಅಂಘ್ರಿ ಸರೋಜ ಮೂಲದಲಿಪ್ಪ ಕಾಣಿಸದೆ||2|| ಅರಿವುದೊಂದು ಯಾಮದೊಳು ಶ್ವಾಸಗಳು ಎರಡು ಸಾವಿರದ ಏಳು ನೂರನು ಶರ ಸಹಸ್ರದ ಮೇಲೆ ನಾನೂರು ಅಹವು ದ್ವಿತೀಯಕ್ಕೆ ಮರಳಿ ಯಾಮತ್ರಯಕೆ ವಸು ಸಾವಿರದ ಮೇಲೆ ನೂರು ಎಣಿಕೆಯಲಿ ಹನ್ನೆರೆಡು ತಾಸಿಗೆ ಹತ್ತು ಸಾವಿರದ ಎಂಟು ನೂರ ಅಹವು||3|| ಒಂದು ದಿನದೊಳಗೆ ಅನಿಳ ಇಪ್ಪ್ಪತ್ತೊಂದು ಸಾವಿರದ ಆರು ನೂರು ಮುಕುಂದನಾಜ್ಞದಿ ಮಾಡಿ ಮಾಡಿಸಿ ಲೋಕಗಳ ಪೊರೆವನೆಂದು ಪವನನ ಪೊಗಳುತಿರು ಎಂದೆಂದೂ ಮರೆಯದೆ ಈ ಮಹಿಮೆ ಸಂಕ್ರಂದನಾದ್ಯರಿಗುಂಟೆ ನೋಡಲು ಸರ್ವ ಕಾಲದಲಿ||4|| ಮೂರು ಲಕ್ಷದ ಮೇಲೆ ವಿಂಶತಿ ಈರೆರೆಡು ಸಾವಿರವು ಪಕ್ಷಕೆ ಆರು ಲಕ್ಷದ ಮೇಲೆ ನಾಲ್ವತ್ತೆಂಟು ಸಾವಿರವು ಮಾರುತನು ಮಾಸಕೆ ಜಪಿಸಿ ಸಂಸಾರ ಸಾಗರದಿಂದ ಸುಜನರ ಪಾರುಗಾಣಿಸಿ ಸಲಹುವನು ಬಹು ಭೋಗಗಳನಿತ್ತು||5|| ಎರಡು ತಿಂಗಳಿಗೆ ಅಹುದು ಋತು ಭೂ ಸುರರು ತಿಳಿವುದು ಶ್ವಾಸ ಜಪ ಹನ್ನೆರಡು ಲಕ್ಷದ ಮೇಲೆ ತೊಂಭತ್ತಾರು ಸಹಸ್ರ ಕರೆಸುವದು ಅಯನ ಅಹ್ವಯದಿ ಅರೆ ವರುಷ ಮೂವತ್ತೆಂಟು ಲಕ್ಷ ಈ ಪರಿ ತಿಳಿವುದು ಎಂಭತ್ತೆಂಟು ಸಹಸ್ರ ಕೋವಿದರು||6|| ವರುಷಕೆ ಇದರ ಇಮ್ಮಡಿ ಜಪಂಗಳ ಗುರುವರಿಯ ತಾ ಮಾಡಿ ಮಾಡಿಸಿ ದುರಿತಗಳ ಪರಿಹರಿಸುವನು ಚಿಂತಿಸುವ ಸಜ್ಜನರ ಸುರ ವಿರೋಧಿಗಳೊಳಗೆ ನೆಲೆಸಿದ್ದು ಅರವಿದೂರ ತಮ ಅಧಿಕಾರಿಗಳ ಇರವರಿತು ಸೋಹಂ ಉಪಾಸನೆ ಮಾಳ್ಪನು ಅವರಂತೆ||7|| ಇನಿತು ಉಪಾಸನೆ ಸರ್ವ ಜೀವರೊಳು ಅನಿಲದೇವನು ಮಾಡುತಿರೆ ಚಿಂತನೆಯ ಮಾಡದೆ ಕಂಡ ನೀರೊಳು ಮುಳುಗಿ ನಿತ್ಯದಲಿ ಮನೆಯೊಳಗೆ ಕೃಷ್ಣಾಜಿನಾದಿ ಆಸನದಿ ಕುಳಿತು ವಿಶಿಷ್ಟ ಬಹು ಸಜ್ಜನನು ಎನಿಸಿ ಜಪ ಮಣಿಗಳ ಎಣಿಸಿದರೇನು ಬೇಸರದೆ||8|| ಓದನೋದಕವು ಎರಡು ತೇಜದೊಳು ಐದುವವು ಲಯ ತದಭಿಮಾನಿಗಳಾದ ಶಿವ ಪವನರು ರಮಾಧೀನತ್ವ ಐದಿಹರು ಈ ದಿವಿಜರ ಒಡಗೂಡಿ ಶ್ರೀ ಮಧುಸೂದನನ ಐದುವಳೆಂದರಿದು ಆದರದಲಿ ಅನ್ನೋದಕವ ಕೊಡುತ ಉಣುತ ಸುಖಿಸುತಿರು||9|| ಜಾಲಿ ತೊಪ್ಪಲ ಅಜಾವಿಗಳು ಮೆದ್ದು ಆಲಯದಿ ಸ್ವೆಚ್ಚಾನುಸಾರದಿ ಪಾಲಗರೆವ ಅಂದದಲಿ ಲಕ್ಷ್ಮೀ ರಮಣ ತನ್ನವರ ಕೀಳು ಕರ್ಮವ ಸ್ವೀಕರಿಸಿ ತನ್ನ ಆಲಯದೊಳಿಟ್ಟು ಅವರ ಪೊರೆವ ಕೃಪಾಳು ಕಾಮದ ಕೈರವದಳ ಶ್ಯಾಮ ಶ್ರೀರಾಮ||10|| ಶಶಿ ದಿವಾಕರ ಪಾವಕರೊಳಿಹ ಅಸಿತಸಿತಲೋಹಿತಗಳಲಿ ಶಿವಸ್ವಸನ ಭಾರ್ಗವಿ ಮೂವರೊಳು ಶ್ರೀ ಕೃಷ್ಣ ಹಯವದನ ವಸುಧಿಪಾರ್ದನ ತ್ರಿವೃತುಯೆನಿಸಿ ವಸುಮತಿಯೊಳು ಅನ್ನೋದಕ ಅನಳ ಪೆಸರಿನಿಂದಲಿ ಸರ್ವ ಜೀವರ ಸಲಹುವನು ಕರುಣಿ||11|| ದೀಪ ಕರದಲಿ ಪಿಡಿದು ಕಾಣದೆ ಕೂಪದೊಳು ಬಿದ್ದಂತೆ ವೇದ ಮಹೋಪನಿಷದ್ ಅರ್ಥಗಳ ನಿತ್ಯದಿ ಪೇಳುವವರೆಲ್ಲ ಶ್ರೀ ಪವನಮುಖ ವಿನುತನ ಅಮಲ ಸುರೂಪಗಳ ವ್ಯಾಪಾರ ತಿಳಿಯದೆ ಪಾಪ ಪುಣ್ಯಕೆ ಜೀವ ಕರ್ತೃ ಆಕರ್ತೃ ಹರಿಯೆಂಬ||12|| ಅನಿಲದೇವನು ವಾಗ್ಮನಃ ಮಯನು ಎನಿಸಿ ಪಾವಕ ವರುಣ ಸಂಕ್ರಂದನ ಮುಖಾದ್ಯರೊಳಿದ್ದು ಭಗವದ್ರೂಪ ಗುಣಗಳನು ನೆನೆನೆನೆದು ಉಚ್ಚರಿಸುತಲಿ ನಮ್ಮನು ಸದಾ ಸಂತೈಸುವನು ಸನ್ಮುನಿ ಗಣ ಆರಾಧಿತ ಪದಾಂಬುಜ ಗೋಜ ಸುರರಾಜ||13|| ಪಾದವು ಎನಿಪವು ವಾಗ್ಮನಃಮಯ ಪಾದರೂಪ ದ್ವಯಗಳೊಳು ಪ್ರಹ್ಲಾದ ಪೋಷಕ ಸಂಕರುಷಣಾಹ್ವಯದಿ ನೆಲೆಸಿದ್ದು ವೇದ ಶಾಸ್ತ್ರ ಪುರಾಣಗಳ ಸಂವಾದ ರೂಪದಿ ಮನನಗೈವುತ ಮೋದಮಯ ಸುಖವಿತ್ತು ಸಲಹುವ ಸರ್ವ ಸಜ್ಜನರ||14|| ಗಂಧವಹ ದಶ ದಿಶಗಳೊಳಗೆ ಅರವಿಂದ ಸೌರಭ ಪಸರಿಸುತ ಘ್ರಾಣ ಇಂದ್ರಿಯಗಳಿಗೆ ಸುಖವನೀವುತ ಸಂಚರಿಸುವಂತೆ ಇಂದಿರೇಶನ ಸುಗುಣಗಳ ದೈನಂದಿನದಿ ತುತಿಸುತ ಅನುಮೋದಿಸುತ ಅಂಧಬಧಿರ ಸುಮೂಕನಂತಿರು ಮಂದ ಜನರೊಡನೆ||15|| ಶ್ರೀರಮಣನ ಅರಮನೆಯ ಪೂರ್ವ ದ್ವಾರದಲಿ ಇಹ ಸಂಜ್ಞಸೂರ್ಯಗ ಭಾರತೀಪತಿ ಪ್ರಾಣನ ಒಳಗಿಹ ಲಕುಮಿ ನಾರಾಯಣನ ಸೇರಿ ಮನುಜೋತ್ತಮರು ಸರ್ವ ಶರೀರಗತ ನಾರಾಯಣನ ಅವತಾರ ಗುಣಗಳ ತುತಿಸುತಲಿ ಮೋದಿಪರು ಮುಕ್ತಿಯಲಿ||16|| ಪ್ರಣವ ಪ್ರತಿಪಾದ್ಯನ ಪುರದ ದಕ್ಷಿಣ ಕವಾಟದಲಿಪ್ಪ ಶಶಿ ರೋಹಿಣಿಗತ ವ್ಯಾನಸ್ಥ ಕೃತಿ ಪ್ರದ್ಯುಮ್ನ ರೂಪವನು ಗುಣಗಳನು ಸಂಸ್ತುತಿಸುತಲಿ ಪಿತೃ ಗಣ ಗಧಾಧರನ ಅತಿವಿಮಲ ಪಟ್ಟಣದ ಒಳಗೆ ಸ್ವೇಚ್ಚಾನುಸಾರದಿ ಸಂಚರಿಸುತಿಹರು||17|| ಅಮಿತ ವಿಕ್ರಮನ ಆಲಯದ ಪಶ್ಚಿಮ ಕವಾಟದಿ ಸತಿಸಹಿತ ಸಂಭ್ರಮದಿ ಭಗವದ್ಗುಣಗಳನೆ ಪೊಗಳುತಲೇ ಮೋದಿಸುವ ಸುಮನಸಾಸ್ಯನೊಳಿಪ್ಪ ಅಪಾನಗ ದಮನ ಸಂಕರುಷಣನ ನಿಹ ಹೃತ್ಕಮಲದೊಳು ಧೇನಿಸುವ ಋಷಿಗಣವ ಐದಿ ಸುಖಿಸುವರು||18|| ಸ್ವರಮಣನ ಗುಣ ರೂಪ ಸಪ್ತಸ್ವರಗಳಿಂದಲಿ ಪಾಡುತಿಹ ತುಂಬುರನೆ ಮೊದಲಾದ ಅಖಿಳ ಗಂಧರ್ವರು ರಮಾಪತಿಯ ಪುರದ ಉತ್ತರ ಬಾಗಿಲಧಿಪ ಸುರಪ ಶಚಿಗ ಸಮಾನ ವಾಯುಗ ಹರಿನ್ಮಣಿನಿಭ ಶಾಂತಿಪತಿ ಅನಿರುದ್ಧನ ಐದುವರು||19|| ಗರುಡ ಶೇಷ ಅಮರ ಇಂದ್ರಮುಖ ಪುಷ್ಕರನೆ ಕಡೆಯಾಗಿಪ್ಪ ಅಖಿಳ ನಿರ್ಜನರು ಊರ್ಧ್ವ ದ್ವಾರಗತ ಭಾರತಿ ಉದಾನದೊಳು ಮೆರೆವ ಮಾಯಾ ವಾಸುದೇವನ ಪರಮ ಮಂಗಳ ಅವಯವಗಳ ಮಂದಿರವನು ಐದಿ ಸದಾ ಮುಕುಂದನ ನೋಡಿ ಸುಖಿಸುವರು||20|| ದ್ವಾರ ಪಂಚಕ ಪಾಲರೊಳಗಿಹ ಭಾರತೀ ಪ್ರಾಣಾಂತರಾತ್ಮಕ ಮಾರಮಣನ ಐ ರೂಪ ತತ್ತತ್ದ್ವಾರದಲಿ ಬಪ್ಪ ಮೂರೆರೆಡು ವಿಧ ಮುಕ್ತಿ ಯೋಗ್ಯರ ತಾರತಮ್ಯವನರಿತು ಅವರ ಕಂಸಾರಿ ಸಂಸಾರಾಬ್ಧಿ ದಾಟಿಸಿ ಮುಕ್ತರಣ ಮಾಳ್ಪ||21|| ಬೆಳಗಿದ ಹೂಜಿಯು ನೋಳ್ಪರಿಗೆ ಥಳಥಳಿಸುತಲಿ ಕಂಗೊಳಿಸುವ ಅಂದದಿ ತೊಳೆದು ದೇಹವ ನಾಮ ಮುದ್ರೆಗಳಿಂದ ಅಲಂಕರಿಸಿ ಒಲಿಸಿ ನಿತ್ಯ ಕುತರ್ಕ ಯುಕ್ತಿಗಳ ಅಲವಬೋಧರ ಶಾಸ್ತ್ರ ಮರ್ಮವ ತಿಳಿಯದಿಹ ನರ ಬರಿದೆ ಇದರೊಳು ಶಂಕಿಸಿದರೇನು||22|| ಉದಧಿಯೊಳು ಊರ್ವಿಗಳು ತೋರ್ಪಂದದಲಿ ಹಂಸೋದ್ಗೀಥ ಹರಿ ಹಯವದನ ಕೃಷ್ಣಾದಿ ಅಮಿತ ಅವತಾರಗಳು ನಿತ್ಯದಲಿ ಪದುಮನಾಭನೊಳು ಇರುತಿಹವು ಸರ್ವದ ಸಮಸ್ತ ಪ್ರಾಣಿಗಳ ಚಿತ್ಹೃದಯಗತ ರೂಪಗಳು ಅವ್ಯವಧಾನದಲಿ ಬಿಡದೆ||23|| ಶರಧಿಯೊಳು ಮಕರಾದಿ ಜೀವರು ಇರುಳು ಹಗಲು ಏಕ ಪ್ರಕಾರದಿ ಚರಿಸುತ ಅನುಮೋದಿಸುತ ಇಪ್ಪಂದದಿ ಜಗತ್ರಯವು ಇರುತಿಹುದು ಜಗದೀಶನುದರದಿ ಕರೆಸುವುದು ಪ್ರತಿಬಿಂಬ ನಾಮದಿ ಧರಿಸಿಹುದು ಹರಿ ನಾಮ ರೂಪಂಗಳನು ಅನವರತ||24|| ಜನನಿ ಸೌಷ್ಠ ಪದಾರ್ಥಗಳು ಭೋಜನವ ಮಾಡಲು ಗರ್ಭಗತ ಶಿಶು ದಿನದಿನದಿ ಅಭಿವೃದ್ಧಿಯೈದುವ ತೆರದಿ ಜೀವರಿಗೆ ಪದುಮನಾಭನು ಸರ್ವ ರಸ ಉಂಡುಣಿಸಿ ಸಂರಕ್ಷಿಸುವ ಜಾಹ್ನವಿ ಜನಕ ಜನ್ಮಾದಿ ಅಖಿಳ ದೋಷ ವಿದೂರ ಗಂಭೀರ||25|| ಆಶೆಗೆ ಒಳಗಾದವನು ಜನರಿಗೆ ದಾಸನೆನಿಸುವ ಆಶೆಯನು ನಿಜ ದಾಸಗೆ ಐದಿಹ ಪುಂಸಗೆ ಎಲ್ಲರು ದಾಸರೆನಿಸುವರು ಶ್ರೀಶನ ಅಂಘ್ರಿ ಸರೋಜಯುಗಳ ನಿರಾಶೆಯಿಂದಲಿ ಭಜಿಸೆ ಒಲಿದು ರಮಾ ಸಹಿತ ತನ್ನನೆ ಕೊಡುವ ಕರುಣಾ ಸಮುದ್ರ ಹರಿ||26|| ದ್ಯುನದಿ ಆದ್ಯಂತವನು ಕಾಣದೆ ಮನುಜನು ಏಕತ್ರದಲಿ ತಾ ಮಜ್ಜನವ ಗೈಯೆ ಸಮಸ್ತ ದೋಷದಿ ಮುಕ್ತನಹ ತೆರದಿ ಅನಘನ ಅಮಲಾನಂತನಂತ ಸುಗುಣಗಳೊಳಗೆ ಒಂದೇ ಗುಣ ಉಪಾಸನೆಯಗೈವ ಮಹಾತ್ಮ ಧನ್ಯ ಕೃತಾರ್ಥನು ಎನಿಸುವನು||27|| ವಾಸುದೇವನು ಕರೆಸುವನು ಕಾರ್ಪಾಸ ನಾಮದಿ ಸಂಕರುಷಣನು ವಾಸವಾಗಿಹ ತೂಲದೊಳು ತಂತುಗನು ಪ್ರದ್ಯುಮ್ನ ವಾಸ ರೂಪ ಅನಿರುದ್ಧ ದೇವನು ಭೂಷಣನು ತಾನಾಗಿ ತೋರ್ಪ ಪರೇಶ ನಾರಾಯಣನು ಸರ್ವದ ಮಾನ್ಯ ಮಾನದನು||28|| ಲಲನೆಯಿಂದೊಡಗೂಡಿ ಚೈಲಗಳೊಳಗೆ ಓತಪ್ರೋತ ರೂಪದಿ ನೆಲೆಸಿಹನು ಚತುರಾತ್ಮಕ ಜಗನ್ನಾಥ ವಿಠಲನು ಛಳಿ ಬಿಸಿಲು ಮಳೆ ಗಾಳಿಯಿಂದ ಅರ ಘಳಿಗೆ ಬಿಡದಲೇ ಕಾವನು ಎಂದರಿದು ಇಳೆಯೊಳು ಅರ್ಚಿಸುತಿರು ಸದಾ ಸರ್ವಾಂತರಾತ್ಮಕನ||29||

Bannanje Govindacharya
Rs.238.00

B.N.K Sharma
Rs.1100.00

B.N.K Sharma
Rs.1445.00
*As an Amazon Associate, we earn from qualifying purchases
Advertisement
Banner Ad Space (728x90)