ದತ್ತಸ್ವಾತಂತ್ರ್ಯ ಸಂಧಿ
37 verses
ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ| ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು|| ಕಾರುಣಿಕ ಹರಿ ತನ್ನೊಳಿಪ್ಪ ಅಪಾರ ಸ್ವಾತಂತ್ರ್ಯ ಗುಣವ ನಾನೂರು ತೆಗೆದು ಸಪಾದ ಆರೊಂದಧಿಕ ಅರವತ್ತು ನಾರಿಗಿತ್ತ ದ್ವಿ ಷೋಡಶ ಅಧಿಕ ನೂರು ಪಾದತ್ರಯವ ತನ್ನ ಶರೀರದೊಳಗೆ ಈಪರಿ ವಿಭಾಗವ ಮಾಡಿ ತ್ರಿಪದಾಹ್ವ||1|| ಸತ್ಯ ಲೋಕಾಧಿಪನೊಳಗೆ ಐವತ್ತೆರೆಡು ಪವಮಾನನೊಳು ನಾಲ್ವತ್ತು ಮೇಲೆಂಟು ಅಧಿಕ ಶಿವನೊಳಗಿಟ್ಟನಿಪ್ಪತ್ತು ಚಿತ್ತಜ ಇಂದ್ರರೊಳು ಐದಧಿಕ ದಶ ತತ್ವಮಾನಿಗಳು ಎನಿಪ ಸುರರೊಳು ಹತ್ತು ಈರೈದು ಅಖಿಳ ಜೀವರೊಳಿಟ್ಟ ನಿರವದ್ಯ||2|| ಕಲಿ ಮೊದಲುಗೊಂಡ ಅಖಿಳ ದಾನವರೊಳಗೆ ನಾಲ್ವತ್ತೈದು ಈ ಪರಿ ತಿಳಿದು ಉಪಾಸನೆ ಮಾಡು ಮರೆಯದೆ ಪರಮ ಭಕುತಿಯಲಿ ಇಳೆಯೊಳಗೆ ಸಂಚರಿಸು ಲಕ್ಷ್ಮೀ ನಿಲಯನ ಆಳಾನೆಂದು ಸರ್ವ ಸ್ಥಳಗಳಲಿ ಸಂತೈಸುತಿಪ್ಪನು ಗೆಳೆಯನಂದದಲಿ||3|| ಅವನಿಪ ಸ್ವಾಮಿತ್ವ ಧರ್ಮವ ಸ್ವವಶ ಮಾತ್ಯರಿಗಿತ್ತು ತಾ ಮತ್ತವರ ಮುಖದಲಿ ರಾಜ ಕಾರ್ಯಾವ ಮಾಡಿಸುವ ತೆರದಿ ಕವಿಭಿರೀಡಿತ ತನ್ನ ಕಳೆಗಳ ದಿವಿಜ ದಾನವ ಮಾನವರೊಳಿಟ್ಟು ಅವಿರತ ಗುಣತ್ರಯಜ ಕರ್ಮವ ಮಾಡಿ ಮಾಡಿಸುವ||4|| ಪುಣ್ಯ ಪಾಪಗಳು ಈ ತೆರದಿ ಕಾರುಣ್ಯ ಸಾಗರ ದೇವದಾನವ ಮಾನವರೊಳಿಟ್ಟು ಅವರ ಫಲ ವ್ಯತ್ಯಾಸವನೆ ಮಾಡಿ ಬನ್ನ ಬಡಿಸುವ ಭಕ್ತಿಹೀನರ ಸನ್ನುತ ಸುಕರ್ಮ ಫಲತೆಗೆದು ಪ್ರಪನ್ನರಿಗೆ ಕೊಟ್ಟು ಅವರ ಸುಖಪಡಿಸುವನು ಸುಭುಜಾಹ್ವ||5|| ಮಾಣಿಕವ ಕೊಂಡು ಅಂಗಡಿಯೊಳು ಅಜಿವಾನ ಕೊಟ್ಟು ಆ ಪುರುಷನ ಸಮಾಧಾನ ಮಾಡುವ ತೆರದಿ ದೈತ್ಯರು ನಿತ್ಯದಲಿ ಮಾಳ್ಪ ದಾನ ಯಜ್ಞಾದಿಗಳ ಫಲ ಪವಮಾನ ಪಿತನು ಅಪಹರಿಸಿ ಅಸಮೀಚೀನ ಸುಖಗಳ ಕೊಟ್ಟು ಅಸುರರ ಮತ್ತರನು ಮಾಳ್ಪ||6|| ಏಣ ಲಾಂಛನನ ಅಮಲ ಕಿರಣ ಕ್ರಮೇಣ ವೃದ್ಧಿಯನು ಐದಿ ಲೋಗರ ಕಾಣಗೊಡದಿಹ ಕತ್ತಲೆಯ ಭಂಗಿಸುವ ತೆರದಂತೆ ವೈನತೇಯಾಂಗಸನ ಮೂರ್ತಿ ಧ್ಯಾನವುಳ್ಳ ಮಹಾತ್ಮರಿಗೆ ಸುಜ್ಞಾನ ಭಕ್ತ್ಯಾದಿಗಳು ವರ್ಧಿಸಿ ಸುಖವೇ ಕೊಡುತಿಹರು||7|| ಜನಪನ ಅರಿಕೆಯ ಚೋರ ಪೊಳಲೊಳು ಧನವ ಕದ್ದೊಯ್ದ ಈಯಲು ಅವನ ಅವಗುಣಗಳು ಎಣಿಸದೆ ಪೊರೆವ ಕೊಡದಿರೆ ಶಿಕ್ಷಿಸುವ ತೆರದಿ ಅನುಚಿತೋಚಿತ ಕರ್ಮ ಕೃಷ್ಣಾರ್ಪಣವೆನಲು ಕೈಕೊಂಡು ತನ್ನರಮನೆಯೊಳಿಟ್ಟು ಆನಂದ ಬಡಿಸುವ ಮಾಧವಾನತರ||8|| ಅನ್ನದ ಅನ್ನಾದ ಅನ್ನ ನಾಮಕ ಮುನ್ನ ಪೇಳ್ದ ಪ್ರಕಾರ ಜೀವರೊಳು ಅನ್ನ ರೂಪ ಪ್ರವೇಶಗೈದು ಅವರವರ ವ್ಯಾಪಾರ ಬನ್ನಬಡದಲೆ ಮಾಡಿ ಮಾಡಿಸಿ ಧನ್ಯರಿವರು ಅಹುದು ಎಂದೆನಿಸಿ ತ್ರೈಗುಣ್ಯ ವರ್ಜಿತ ತತ್ತದಾಹ್ವಯನು ಆಗಿ ಕರೆಸುವನು||9|| ಸಲಿಲಬಿಂದು ಪಯಾಬ್ಧಿಯೊಳು ಬೀಳಲು ವಿಕಾರವನು ಐದ ಬಲ್ಲದೆ ಜಲವು ತದ್ರೂಪವನೆ ಐದುವುದು ಎಲ್ಲ ಕಾಲದಲಿ ಕಲಿಲಮಲಾಪಹನ ಅರ್ಚಿಸುವ ಸತ್ಕುಲಜರ ಕುಕರ್ಮಗಳು ತಾನಿಷ್ಕಲುಷ ಕರ್ಮಗಳಾಗಿ ಪುರುಷಾರ್ಥಗಳ ಕೊಡುತಿಹರು||10|| ಮೊಗದೊಳಗೆ ಮೊಗವಿಟ್ಟು ಮುದ್ದಿಸಿ ಮಗುವಿನಂ ಬಿಗಿದಪ್ಪಿ ರಂಬಿಸಿ ನೇಹದಿ ತೆಗೆದು ತನ್ನಯ ಸ್ತನಗಳು ಉಣಿಸುವ ಜನನಿಯಂದದಲಿ ಅಗಣಿತಾತ್ಮನು ತನ್ನ ಪಾದಾಬ್ಜಗಳ ಧೇನಿಪ ಭಕ್ತ ಜನರಿಗೆ ಪ್ರಘಟಕನು ತಾನಾಗಿ ಸೌಖ್ಯಗಳು ಏವ ಸರ್ವತ್ರ||11|| ತೋಟಿಗನು ಭೂಮಿಯೊಳು ಬೀಜವ ನಾಟಬೇಕೆಂದೆನುತ ಹಿತದಲಿ ಮೋಟೆಯಿಂ ನೀರೆತ್ತಿ ಸಸಿಗಳ ಸಂತೈಸುವಂತೆ ಪಾಟುಬಡದಲೆ ಜಗದಿ ಜೀವರ ಘೋಟಕಾಸ್ಯನು ಸೃಜಿಸಿ ಯೋಗ್ಯತೆ ದಾಟಗೊಡದಲೆ ಸಲಹುತಿಪ್ಪನು ಸರ್ವ ಕಾಲದಲಿ||12|| ಭೂಮಿಯೊಳು ಜಲವಿರೆ ತೃಷಾರ್ತನು ತಾ ಮರೆದು ಮೊಗವೆತ್ತಿ ಎಣ್ದೆಸೆವ್ಯೋಮ ಮಂಡಲದೊಳಗೆ ಕಾಣದೆ ಮಿಡುಕುವಂದದಲಿ ಶ್ರೀ ಮನೋರಮ ಸರ್ವರ ಅಂತರ್ಯಾಮಿಯು ಆಗಿರೆ ತಿಳಿಯಲರಿಯದೆ ಭ್ರಾಮಕರು ಭಜಿಸುವರು ಭಕುತಿಯಲಿ ಅನ್ಯ ದೇವತೆಯ||13|| ಮುಖ್ಯ ಫಲ ವೈಕುಂಠ ಮುಖ್ಯಾಮುಖ್ಯ ಫಲ ಮಹದಾದಿ ಲೋಕಾ ಅಮುಖ್ಯ ಫಲ ವೈಷಯಿಕವು ಎಂದರಿದು ಅತಿ ಭಕುತಿಯಿಂದ ರಕ್ಕಸ ಅರಿಯ ಭಜಿಸುತಲಿ ನಿರ್ದುಃಖನಾಗು ನಿರಂತರದಿ ಮೊರೆ ಪೊಕ್ಕವರ ಬಿಡ ಭೃತ್ಯವತ್ಸಲ ಭಾರತೀಶ ಪಿತ||14|| ವ್ಯಾಧಿಯಿಂ ಪೀಡಿತ ಶಿಶುವಿಗೆ ಗುಡೋದಕವ ನೆರೆದು ಅದಕೆ ಔಷಧ ತೇದು ಕುಡಿಸುವ ತಾಯಿಯ ಉಪಾದಿಯಲಿ ಸರ್ವಜ್ಞ ಬಾದರಾಯಣ ಭಕ್ತ ಜನಕೆ ಪ್ರಸಾದ ರೂಪಕನಾಗಿ ಭಾಗವತಾದಿಯಲಿ ಪೇಳಿದನು ಧರ್ಮಾದಿಗಳೇ ಫಲವೆಂದು||15|| ದೂರದಲ್ಲಿಹ ಪರ್ವತ ಘನಾಕಾರ ತೋರ್ಪುದು ನೋಳ್ಪ ಜನರಿಗೆ ಸಾರಗೈಯಲು ಸರ್ವ ವ್ಯಾಘ್ರಗಳಿಂದ ಭಯವಿಹುದು ಘೋರತರ ಸಂಸಾರ ಸೌಖ್ಯ ಅಸಾರತರವೆಂದು ಅರಿತು ನಿತ್ಯ ರಮಾರಮಣನ ಆರಾಧಿಸುವರು ಅದರಿಂದ ಬಲ್ಲವರು||16|| ಕೆಸರ ಘಟಗಳ ಮಾಡಿ ಬೇಸಿಗೆ ಬಿಸಿಲೊಳಗೆ ಇಟ್ಟು ಒಣಗಿಸಿದರು ಅದು ಘನ ರಸವು ತುಂಬಲು ಬಹುದೇ? ಸರ್ವ ಸ್ವಾತಂತ್ರ ನಾನೆಂಬ ಪಶುಪ ನರನು ಏನೇನು ಮಾಳ್ಪ ಅನಶನ ದಾನ ಸ್ನಾನ ಕರ್ಮಗಳು ಒಸರಿ ಪೋಪವು ಬರಿದೆ ದೇಹ ಆಯಾಸವನೆ ಕೊಟ್ಟು||17|| ಎರಡು ದೀಕ್ಷೆಗಳಿಹವು ಬಾಹ್ಯಾಂತರವು ಎನಿಪ ನಾಮದಲಿ ಬುಧರಿಂದರಿತು ದೀಕ್ಷಿತನು ಆಗು ದೀರ್ಘ ದ್ವೇಷಗಳ ಬಿಟ್ಟು ಹರಿಯೇ ಸರ್ವೋತ್ತಮ ಕ್ಷರಾಕ್ಷರ ಪುರುಷ ಪೂಜಿತ ಪಾದ ಜನ್ಮಾದಿ ಅರವಿ ದೂರ ಸುಖಾತ್ಮ ಸರ್ವಗನು ಎಂದು ಸ್ಮರಿಸುತಿರು||18|| ಹೇಯವಸ್ತುಗಳಿಲ್ಲವು ಉಪಾದೇಯ ವಸ್ತುಗಳಿಲ್ಲ ನ್ಯಾಯಾನ್ಯಾಯ ಧರ್ಮಗಳಿಲ್ಲ ದ್ವೇಷ ಅಸೂಯೆ ಮೊದಲಿಲ್ಲ ತಾಯಿ ತಂದೆಗಳಿಲ್ಲ ಕಮಲದಳಾಯತ ಅಕ್ಷಗೆಯೆನಲು ಈಸುವ ಕಾಯಿಯಂದದಿ ಮುಳಗಗೊಡದೆ ಭವಾಬ್ಧಿ ದಾಟಿಸುವ||19|| ಮಂದನಾದರು ಸರಿಯೆ ಗೋಪೀಚಂದನ ಶ್ರೀ ಮುದ್ರೆಗಳ ನಲಿವಿಂದ ಧರಿಸುತ ಶ್ರೀ ತುಳಸಿ ಪದುಮಾಕ್ಷಿ ಸರಗಳನು ಕಂಧರದ ಮಧ್ಯದಲಿ ಧರಿಸಿ ಮುಕುಂದ ಶ್ರೀ ಭೂರಮಣ ತ್ರಿಜಗದ್ವಂದ್ಯ ಸರ್ವ ಸ್ವಾಮಿ ಮಮ ಕುಲದೈವವು ಎನೆ ಪೊರೆವ||20|| ಪ್ರಾಯ ಧನ ಮದದಿಂದ ಜನರಿಗೆ ನಾಯಕ ಪ್ರಭುವೆಂಬಿ ಪೂರ್ವದಿ ತಾಯಿ ಪೊಟ್ಟೆಯೊಳಿರಲು ಪ್ರಭುವೆಂದೇಕೆ ಕರೆಯರಲೈ? ಕಾಯ ನಿನ್ನನು ಬಿಟ್ಟು ಪೋಗಲು ರಾಯಾ ನೀನೆಂಬುವ ಪ್ರಭುತ್ವ ಪಲಾಯನವನೈದಿತು ಸಮೀಪದಲಿದ್ದರೆ ಅದು ತೋರು||21|| ವಾಸುದೇವ ಏಕ ಪ್ರಕಾರದಿ ಈಶನೆನಿಸುವ ಬ್ರಹ್ಮ ರುದ್ರ ಶಚಿ ಈಶ ಮೊದಲಾದ ಅಮರರೆಲ್ಲರು ದಾಸರೆನಿಸುವರು ಈ ಸುಮಾರ್ಗವ ಬಿಟ್ಟು ಸೋಹಮುಪಾಸನೆಯಗೈವ ನರ ದೇಹಜ ದೈಶಿಕ ಕ್ಲೇಶಗಳು ಬರಲು ಅವನು ಏಕೆ ಬಿಡಿಸಿಕೊಳ||22|| ಆ ಪರ ಬ್ರಹ್ಮನಲಿ ತ್ರಿಜಗದ್ವ್ಯಾಪಕಾತ್ವ ನಿಯಾಮಕಾತ್ವ ಸ್ಥಾಪಕಾತ್ವ ವಶಾತ್ವ ಈಶಾತ್ವಾದಿ ಗುಣಗಳಿಗೆ ಲೋಪವಿಲ್ಲ ಏಕ ಪ್ರಕಾರ ಸ್ವರೂಪವು ಎನಿಪವು ಸರ್ವ ಕಾಲದಿ ಪೋಪವಲ್ಲವು ಜೀವರಿಗೆ ದಾಸಾತ್ವದುಪಾದಿ||23|| ನಿತ್ಯನೂತನ ನಿರ್ವಿಕಾರ ಸುಹೃತ್ತಮ ಪ್ರಣವಸ್ಥ ವರ್ಣೋತ್ಪತ್ತಿ ಕಾರಣ ವಾಗ್ಮನಃಮಯ ಸಾಮಗಾನರತ ದತ್ತ ಕಪಿಲ ಹಯಾಸ್ಯ ರೂಪದಿ ಪೃಥ್ ಪ್ರುತಗ್ ಜೀವರೊಳಗಿದ್ದು ಪ್ರವರ್ತಿಸುವನು ಅವರವರ ಯೋಗ್ಯತೆ ಕರ್ಮವ ಅನುಸರಿಸಿ||24|| ಶೃತಿಗಳು ಆತನ ಮಾತು ವಿಮಲಾ ಸ್ಮೃತಿಗಳು ಆತನ ಶಿಕ್ಷೆ ಜೀವ ಪ್ರತತಿ ಪ್ರಕೃತಿಗಳು ಎರಡು ಪ್ರತಿಮೆಗಳು ಎನಿಸಿಕೊಳುತಿಹವು ಇತರ ಕರ್ಮಗಳು ಎಲ್ಲ ಲಕ್ಷ್ಮೀ ಪತಿಗೆ ಪೂಜೆಗಳೆಂದು ಸ್ಮರಿಸುತ ಚತುರ ವಿಧ ಪುರುಷಾರ್ಥಗಳ ಬೇಡದಿರು ಸ್ವಪ್ನದಲಿ||25|| ಭೂತಳಾಧಿಪನು ಆಜ್ಞ ಧಾರಕ ದೂತರಿಗೆ ಸೇವಾನುಸಾರದಿ ವೇತನವ ಕೊಟ್ಟು ಅವರ ಸಂತೋಷಿಸುವ ತೆರದಂತೆ ಮಾತರಿಶ್ವ ಪ್ರಿಯನು ಪರಮ ಪ್ರೀತಿ ಪೂರ್ವಕ ಸದ್ಗುಣಂಗಳ ಗಾಧಕರ ಸಂತೋಷ ಪಡಿಸುವ ಇಹ ಪರಂಗಳಲಿ||26|| ದೀಪ ದಿವದಲಿ ಕಂಡರಾದಡೆ ಲೋಪಗೈಸುವರು ಆ ಕ್ಷಣ ಹರಿ ಸಮೀಪದಲ್ಲಿರೆ ನಂದ ನಾಮ ಸುನಂದವು ಎನಿಸುವವು ಔಪಚಾರಿಕವಲ್ಲ ಸುಜನರ ಪಾಪ ಕರ್ಮವು ಪುಣ್ಯವು ಎನಿಪವು ಪಾಪಿಗಳ ಸತ್ಪುಣ್ಯ ಕರ್ಮವು ಪಾಪವು ಎನಿಸುವವು||27|| ಧನವ ಸಂಪಾದಿಸುವ ಪ್ರದ್ರಾವಣಿಕರಂದದದಿ ಕೋವಿದರ ಮನೆಮನೆಗಳಲಿ ಸಂಚರಿಸು ಶಾಸ್ತ್ರ ಶ್ರವಣ ಗೋಸುಗದಿ ಮನನಗೈದು ಉಪದೇಶಿಸುತ ದುರ್ಜನರ ಕೂಡಿ ಆಡದಿರು ಸ್ವಪ್ನದಿ ಪ್ರಣತ ಕಾಮದ ಕೊಡುವ ಸೌಖ್ಯಗಳ ಇಹ ಪರಂಗಳಲಿ||28|| ಕಾರಕ ಕ್ರಿಯ ದ್ರವ್ಯ ವಿಭ್ರಮ ಮೂರು ವಿಧ ಜೀವರಿಗೆ ಬಹು ಸಂಸಾರಕೆ ಇವು ಕಾರಣವು ಎನಿಸುವವು ಎಲ್ಲ ಕಾಲದಲಿ ದೂರ ಓಡಿಸಿ ಭ್ರಾಮಕತ್ರಯ ಮಾರಿಗೆ ಒಳಗಾಗದಲೆ ಸರ್ವಾರಾಧಕನ ಚಿಂತಿಸುತಲಿರು ಸರ್ವತ್ರ ಮರೆಯದಲೆ||29|| ಕರಣ ಕರ್ಮವ ಮಾಡಿದರೆ ವಿಸ್ಮರಣೆ ಕಾಲದಿ ಮಾತುಗಳಿಗೆ ಉತ್ತರವ ಕೊಡದಲೆ ಸುಮ್ಮನಿಪ್ಪನು ಜಾಗರಾವಸ್ಥೆ ಕರುಣಿಸಲು ವ್ಯಾಪಾರ ಮಾಡುವ ಬರಲು ನಾಲ್ಕವಸ್ಥೆಗಳು ಪರಿಹರಿಸಿ ಕೊಳನು ಏತಕೆ? ಸ್ವತಂತ್ರನು ತಾನೆಯೆಂಬುವನು||30|| ಯುಕ್ತಿ ಮಾತುಗಳಲ್ಲ ಶ್ರುತಿ ಸ್ಮೃತಿ ಉಕ್ತ ಮಾತುಗಳಿವು ವಿಚಾರಿಸಿ ಮುಕ್ತಿಗಿವು ಸೋಪಾನವು ಎನಿಪವು ಪ್ರತಿಪ್ರತಿ ಪದವು ಭಕ್ತಿಪೂರ್ವಕ ಪಠಿಸುವವರಿಗೆ ವ್ಯಕ್ತಿ ಕೊಡುವ ಸ್ವರೂಪ ಸುಖ ಪ್ರವಿವಿರಕ್ತನ ಮಾಡುವನು ಭವಭಯದಿಂದ ಬಹು ರೂಪ||31|| ಶ್ರೀನಿವಾಸನ ಸುಗುಣ ಮಣಿಗಳ ಪ್ರಾಣಮಾತ ವಯುನಾಖ್ಯ ಸೂತ್ರದಿ ಪೋಣಿಸಿದ ಮಾಲಿಕೆಯ ವಾಗ್ಮಯಗೆ ಸಮರ್ಪಿಸಿದ ಜ್ಞಾನಿಗಳ ದೃಕ್ ವಿಷಯವುಹುದ ಅಜ್ಞಾನಿಗಳಿಗೆ ಅಸಹ್ಯ ತೋರ್ಪುದು ಮಾಣಿಕವ ಮರ್ಕಟನ ಕೈಯಲಿ ಕೊಟ್ಟ ತೆರದಂತೆ||32|| ಶ್ರೀವಿಧಿ ಈರ ವಿಪಾಹಿಪ ಈಶ ಶಚೀ ವರಾತ್ಮಭವ ಅರ್ಕ ಶಶಿ ದಿಗ್ದೇವ ಋಷಿ ಗಂಧರ್ವ ಕಿನ್ನರ ಸಿದ್ಧ ಸಾಧ್ಯ ಗಣ ಸೇವಿತ ಪದಾಂಬುಜ ತ್ವತ್ಪಾದಾಲವಂಬಿಗಳು ಆದ ಭಕ್ತರ ಕಾವ ಕರುಣಾ ಸಾಂದ್ರ ಲಕ್ಷ್ಮೀ ಹೃತ್ಕುಮುದ ಚಂದ್ರ||33|| ಆದರಿಶ ಅಗತಾಕ್ಷ ಭಾಷಾ ಭೇದದಿಂದಲಿ ಕರೆಯಲು ಅದನು ನಿಷೇಧಗೈದು ಅವಲೋಕಿಸದೆ ಬಿಡುವರೆ ವಿವೇಕಿಗಳು ಮಾಧವನ ಗುಣ ಪೇಳ್ವ ಪ್ರಾಕೃತವು ಆದರೆಯು ಸರಿ ಕೇಳಿ ಪರಮ ಆಹ್ಲಾದಬಡದಿಪ್ಪರೆ? ನಿರಂತರ ಬಲ್ಲ ಕೋವಿದರು||34|| ಭಾಸ್ಕರನ ಮಂಡಲವ ಕಂಡು ನಮಸ್ಕರಿಸಿ ಮೋದಿಸದೆ ದ್ವೇಷದಿ ತಸ್ಕರನು ನಿಂದಿಸಲು ಕುಂದಹುದೇ ದಿವಾಕರಗೆ ಸಂಸ್ಕೃತವು ಇದಲ್ಲ ಎಂದು ಕುಹಕ ತಿರಸ್ಕರಿಸಲು ಏನಹುದು? ಭಕ್ತಿ ಪುರಸ್ಕರದಿ ಕೇಳ್ವರಿಗೊಲಿವನು ಪುಷ್ಕರಾಕ್ಷ ಸದಾ||35|| ಪತಿತನ ಕಪಾಲದೊಳು ಭಾಗೀರಥಿಯ ಜಲವಿರೆ ಪೇಯವು ಎನಿಪುದೆ? ಇತರ ಕವಿ ನಿರ್ಮಿತ ಕುಕಾವ್ಯ ಅಶ್ರಾವ್ಯ ಬುಧರಿಂದ ಕೃತಿ ಪತಿಕಥಾನ್ವಿತವು ಎನಿಪ ಪ್ರಾಕೃತವೆ ತಾ ಸಂಸ್ಕೃತವು ಎನಿಸಿ ಸದ್ಗತಿಯನೀವುದು ಭಕ್ತಿ ಪೂರ್ವಕ ಕೇಳಿ ಪೇಳ್ವರಿಗೆ||36|| ಶಾಸ್ತ್ರ ಸಯುಕ್ತಿ ಗ್ರಂಥಗಳು ಓದಿ ಕೇಳ್ದವನಲ್ಲ ಸಂತತ ಸಾಧುಗಳ ಸಹವಾಸ ಸಲ್ಲಾಪಗಳು ಮೊದಲಿಲ್ಲ ಮೋದ ತೀರ್ಥ ಆರ್ಯರ ಮತಾನುಗರು ಆದವರ ಕರುಣದಲಿ ಪೇಳ್ದೆ ರಮಾಧವ ಜಗನ್ನಾಥ ವಿಠಲ ತಿಳಿಸಿದದರೊಳಗೆ||37||

Bannanje Govindacharya
Rs.238.00

B.N.K Sharma
Rs.1100.00

B.N.K Sharma
Rs.1445.00
*As an Amazon Associate, we earn from qualifying purchases
Advertisement
Banner Ad Space (728x90)