ವ್ಯಾಪ್ತಿ ಸಂಧಿ
32 verses
ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು|| ಪುರುಷರೂಪತ್ರಯ ಪುರಾಣ ಪುರುಷ ಪುರುಷೋತ್ತಮ ಕ್ಷರಾಕ್ಷರ ಪುರುಷ ಪೂಜಿತ ಪಾದ ಪೂರ್ಣಾನಂದ ಜ್ಞಾನಮಯ ಪುರುಷಸೂಕ್ತ ಸುಮೇಯ ತತ್ತತ್ ಪುರುಷ ಹೃತ್ಪುಷ್ಕರ ನಿಲಯ ಮಹಾಪುರುಷ ಅಜಾಂಡ ಅಂತರದಿ ಬಹಿರದಿ ವ್ಯಾಪ್ತ ನಿರ್ಲಿಪ್ತ||1|| ಸ್ತ್ರೀ ನಪುಂಸಕ ಪುರುಷ ಭೂ ಸಲಿಲ ಅನಲ ಗಗನ ಮನ ಶಶಿ ಭಾನು ಕಾಲ ಗುಣ ಪ್ರಕೃತಿಯೊಳಗೆ ಒಂದು ತಾನಲ್ಲ ಏನು ಇವನ ಮಹಾಮಹಿಮೆ ಕಡೆಗಾಣರು ಅಜಭವ ಶಕ್ರ ಮುಖರು ನಿಧಾನಿಸಲು ಮಾನವರಿಗೆ ಅಳವಡುವುದೇ ವಿಚಾರಿಸಲು||2|| ಗಂಧ ರಸರೂಪ ಸ್ಪರ್ಶ ಶಬ್ದ ಒಂದು ತಾನಲ್ಲ ಅದರದರ ಪೆಸರಿಂದ ಕರೆಸುತ ಜೀವರಿಗೆ ತರ್ಪಕನು ತಾನಾಗಿ ಪೊಂದಿಕೊಂಡಿಹ ಪರಮ ಕರುಣಾಸಿಂಧು ಶಾಶ್ವತ ಮನವೆ ಮೊದಲಾದ ಇಂದ್ರಿಯಗಳೊಳಗೆ ಇದ್ದು ಭೋಗಿಸುತಿಹನು ವಿಷಯಗಳ||3|| ಶ್ರವಣ ನಯನ ಘ್ರಾಣ ತ್ವಗ್ರಸನ ಇವುಗಳೊಳು ವಾಕ್ಪಾಣಿ ಪಾದಾದಿ ಅವಯವಗಳೊಳು ತದ್ಗುಣಗಳೊಳು ತತ್ಪತಿಗಳೊಳಗೆ ಪ್ರವಿತತನು ತಾನಾಗಿ ಕೃತಿಪತಿ ವಿವಿಧ ಕರ್ಮವ ಮಾಡಿ ಮಾಡಿಸಿ ಭವಕೆ ಕಾರಣನಾಗಿ ತಿರುಗಿಸುತಿಹನು ತಿಳಿಸದಲೆ||4|| ಗುಣಿಗುಣಗಳೊಳಗೆ ಇದ್ದು ಗುಣಿಗುಣನು ಎನಿಸುವನು ಗುಣಬದ್ಧನಾಗದೆ ಗುಣಜ ಪುಣ್ಯಾಪುಣ್ಯ ಫಲ ಬ್ರಹ್ಮಾದಿಚೇತನಕೆ ಉಣಿಸುತ ಅವರೊಳಗಿದ್ದು ವೃಜಿನ ಅರ್ದನ ಚಿದಾನಂದೈಕ ದೇಹವನು ಕೊನೆಗೆ ಸಚರಾಚಾರ ಜಗದ್ಭುಕುವೆನಿಪನು ಅವ್ಯಯನು||5|| ವಿದ್ಯೆ ತಾನೆನೆಸಿಕೊಂಬ ಅನಿರುದ್ಧದೇವನು ಸರ್ವಜೀವರ ಬುದ್ಧಿಯಲಿ ತಾನಿದ್ದು ಕೃತಿಪತಿ ಬುದ್ಧಿಯೆನಿಸುವನು ಸಿದ್ಧಿಯೆನಿಸುವ ಸಂಕರುಷನ ಪ್ರಸಿದ್ಧನಾಮಕ ವಾಸುದೇವ ಅನವದ್ಯ ರೂಪ ಚತುಷ್ಟಯಗಳ ಅರಿತವನೆ ಪಂಡಿತನು||6|| ತನುಚತುಷ್ಟಯಗಳೊಳು ನಾರಾಯಣನು ಹೃತ್ಕಮಲಾಖ್ಯ ಸಿಂಹಾಸನದೊಳು ಅನಿರುದ್ಧಾದಿ ರೂಪಗಳಿಂದ ಶೋಭಿಸುತ ತನಗೆ ತಾನೇ ಸೇವ್ಯ ಸೇವಕನೆನೆಸಿ ಸೇವಾಸಕ್ತ ಸುರರೊಳಗೆ ಅನವರತ ನೆಲೆಸಿದ್ದು ಸೇವೆಯ ಕೊಂಬನವರಂತೆ||7|| ಜಾಗರ ಸ್ವಪ್ನಂಗಳೊಳು ವರಭೋಗೀಶಯನನು ಬಹು ಪ್ರಕಾರ ವಿಭಾಗಗೈಸಿ ನಿರಂಶಜೀವರ ಚಿತ್ಶರೀರವನು ಭೋಗವಿತ್ತು ಸುಷುಪ್ತಿಕಾಲದಿ ಸಾಗರವ ನದಿ ಕೂಡುವಂತೆ ವಿಯೋಗರಹಿತನು ಅಂಶಗಳನು ಏಕತ್ರವೈದಿಸುವ||8|| ಭಾರ್ಯರಿಂದೊಡಗೂಡಿ ಕಾರಣಕಾರ್ಯ ವಸ್ತುಗಳಲ್ಲಿ ಪ್ರೆರಕಪ್ರೇರ್ಯ ರೂಪಗಳಿಂದ ಪಟತಂತುಗಳವೊಳಿದ್ದು ಸೂರ್ಯ ಕಿರಣಗಳಂತೆ ತನ್ನಯ ವೀರ್ಯದಿಂದಲಿ ಕೊಡುತ ಕೊಳುತಿಹ ಅನಾರ್ಯರಿಗೆ ಈತನ ವಿಹಾರವು ಗೋಚರಿಪುದೇನೋ||9|| ಜನಕ ತನ್ನ ಆತ್ಮಜಗೆ ವರ ಭೂಷಣದುಕೂಲವ ತೊಡಿಸಿ ತಾ ವಂದನೆಯ ಕೈಕೊಳುತ ಹರಸುತ ಹರುಷಬಡುವಂತೆ ವನರುಹೇಕ್ಷಣ ಪೂಜ್ಯ ಪೂಜಕನು ಎನಿಸಿ ಪೂಜಾಸಾಧನ ಪದಾರ್ಥವನು ತನಗೆ ತಾನಾಗಿ ಫಲಗಳನೀವ ಭಜಕರಿಗೆ||10|| ತಂದೆ ಬಹು ಸಂಭ್ರಮದಿ ತನ್ನಯ ಬಂಧು ಬಳಗವ ನೆರಹಿ ಮದುವೆಯ ನಂದನಗೆ ತಾ ಮಾಡಿ ಮನೆಯೊಳಗಿಡುವ ತೆರದಂತೆ ಇಂದಿರಾಧವ ತನ್ನ ಇಚ್ಚಯಲಿಂದ ಗುಣಗಳ ಚೇತನಕೆ ಸಂಬಂಧಗೈಸಿ ಸುಖಾಸುಖಾತ್ಮಕ ಸಂಸೃತಿಯೊಳು ಇಡುವ||11|| ತೃಣ ಕೃತ ಆಲಯದೊಳಗೆ ಪೋಗೆ ಸಂದಣಿಸಿ ಪ್ರತಿ ಛಿದ್ರದಲಿ ಪೊರಮಟ್ಟು ಅನಳ ನಿರವನು ತೋರಿ ತೋರದಲಿಪ್ಪ ತೆರದಂತೆ ವನಜಾಂಡದೊಳು ಅಖಿಳ ಜೀವರ ತನುವಿನ ಒಳ ಹೊರಗೆ ಇದ್ದು ಕಾಣಿಸದೆ ಅನಿಮಿಶೇಷನು ಸಕಲ ಕರ್ಮವ ಮಾಳ್ಪನು ಅವರಂತೆ||12|| ಪಾದಪಗಳ ಅಡಿಗೆ ಎರೆಯೆ ಸಲಿಲವು ತೋದು ಕಂಬಿಗಳು ಉಬ್ಬಿ ಪುಷ್ಪ ಸ್ವಾದು ಫಲವ ಈವಂದದಲಿ ಸರ್ವೇಶ್ವರನು ಜನರ ಆರಾಧನೆಯ ಕೈಕೊಂಡು ಬ್ರಹ್ಮ ಭವಾದಿಗಳ ನಾಮದಲಿ ಫಲವಿತ್ತು ಆದರಿಸುವನು ತನ್ನ ಮಹಿಮೆಯ ತೋರಗೊಡ ಜನಕೆ||13|| ಶೃತಿತತಿಗಳಿಗೆ ಗೋಚರಿಸದ ಅಪ್ರತಿಮ ಅಜಾನಂದಾತ್ಮನು ಅಚ್ಯುತ ವಿತತ ವಿಶ್ವಾಧಾರ ವಿದ್ಯಾಧೀಶ ವಿಧಿ ಜನಕ ಪ್ರತಿದಿವಸ ಚೇತನರೊಳಗೆ ಪ್ರಾಕೃತ ಪುರುಷನಂದದಲಿ ಸಂಚರಿಸುತ ನಿಯಮ್ಯ ನಿಯಾಮಕನು ತಾನಾಗಿ ಸಂತೈಪ||14|| ಮನ ವಿಷಯದೊಳಗೆ ಇರಿಸಿ ವಿಷಯವ ಮನದೊಳಗೆ ನೆಲೆಗೊಳಿಸಿ ಬಲು ನೂತನವು ಸುಸಮೀಚೀನವಿದು ಉಪಾದೇಯವೆಂದೆನಿಸಿ ಕನಸಿಲಾದರು ತನ್ನ ಪಾದದ ನೆನೆವನು ಈಯದೆ ಸರ್ವರೊಳಗಿದ್ದು ಅನುಭವಿಸುವನು ಸ್ಥೂಲ ವಿಷಯವ ವಿಶ್ವನೆಂದೆನಿಸಿ||15|| ತೋದಕನು ತಾನಾಗಿ ಮನ ಮೊದಲಾದ ಕರಣದೊಳು ಇದ್ದು ವಿಷಯವ ನೈದುವನು ನಿಜಪೂರ್ಣ ಸುಖಮಯ ಗ್ರಾಹ್ಯ ಗ್ರಾಹಕನು ವೇದ ವೇದ್ಯನು ತಿಳಿಯದವನೋಪಾದಿ ಭುಂಜಿಸುತ ಎಲ್ಲರೊಳಗೆ ಆಹ್ಲಾದ ಪಡುವನು ಭಕ್ತವತ್ಸಲ ಭಾಗ್ಯಸಂಪನ್ನ||16|| ನಿತ್ಯನಿಗಮಾತೀತ ನಿರ್ಗುಣ ಭೃತ್ಯವತ್ಸಲ ಭಯವಿನಾಶನ ಸತ್ಯಕಾಮ ಶರಣ್ಯ ಶ್ಯಾಮಲ ಕೋಮಲಾಂಗ ಸುಖಿ ಮತ್ತನಂದದಿ ಮರ್ತ್ಯರ ಒಳ ಹೊರಗೆ ಎತ್ತ ನೋಡಲು ಸುತ್ತುತ ಇಪ್ಪನು ಅತ್ಯಧಿಕ ಸಂತೃಪ್ತ ತ್ರಿಜಗದ್ವ್ಯಾಪ್ತ ಪರಮಾಪ್ತ||17|| ಪವಿ ಹರಿನ್ಮಣಿ ವಿದ್ರುಮದ ಸಚ್ಛವಿಗಳ ಅಂದದಿ ರಾಜಿಸುತ ಮಾಧವ ನಿರಂತರ ಮಾನವ ದಾನವರೊಳು ಇದ್ದು ತ್ರಿವಿಧ ಗುಣ ಕರ್ಮ ಸ್ವಭಾವವ ಪವನಮುಖ ದೇವಾಂತರಾತ್ಮಕ ದಿವಸ ದಿವಸದಿ ವ್ಯಕ್ತಮಾಡುತಲಿ ಅವರೊಳಿದ್ದು ಉಣಿಪ||18|| ಅಣು ಮಹತ್ತಿನೊಳು ಇಪ್ಪ ಘನ ಪರಮಣುವಿನೊಳು ಅಡಗಿಸುವ ಸೂಕ್ಷ್ಮವ ಮುಣುಗಿಸುವ ತೇಲಿಸುವ ಸ್ಥೂಲಗಳ ಅವನ ಮಾಯವಿದು ದನುಜ ರಾಕ್ಷಸರು ಎಲ್ಲರು ಇವನೊಳು ಮುನಿದು ಮಾಡುವುದೇನು ಉಲೂಖಲ ಒನಕೆಗಳು ಧಾನ್ಯಗಳ ಹಣಿವಂದದಲಿ ಸಂಹರಿಪ||19|| ದೇವ ಮಾನವ ದಾನವರು ಎಂದು ಈ ವಿಧದಲಿ ಆವಾಗಲಿ ಇಪ್ಪರು ಮೂವರೊಳಗೆ ಇವಗೆ ಇಲ್ಲ ಸ್ನೇಹ ಉದಾಸೀನ ದ್ವೇಷ ಜೀವರ ಅಧಿಕಾರ ಅನುಸಾರದಲಿ ಈವ ಸುಖ ಸಂಸಾರ ದುಃಖವ ತಾ ಉಣದಲೆ ಅವರವರಿಗೆ ಉಣಿಸುವ ನಿರ್ಗತಾಶನನು||20|| ಎಲ್ಲಿ ಕೇಳಿದರೆ ಎಲ್ಲಿ ನೋಡಿದರೆ ಎಲ್ಲಿ ಬೇಡಿದರೆ ಎಲ್ಲಿ ನೀಡಿದರೆ ಎಲ್ಲಿ ಓಡಿದರೆ ಎಲ್ಲಿ ಆಡಿದರೆ ಅಲ್ಲೇ ಇರುತಿಹನು ಬಲ್ಲಿದರಿಗೆ ಅತಿ ಬಲ್ಲಿದನು ಸರಿಯಿಲ್ಲ ಇವಗೆ ಅಲ್ಲಿ ನೋಡಲು ಖುಲ್ಲಮಾನವರೊಲ್ಲನು ಅಪ್ರತಿಮಲ್ಲ ಜಗಕೆಲ್ಲ||21|| ತಪ್ತ ಲೋಹವು ನೋಳ್ಪ ಜನರಿಗೆ ಸಪ್ತ ಜಿಹ್ವವ ತೆರದಿ ತೋರ್ಪದು ಲುಪ್ತ ಪಾವಕ ಲೋಹ ಕಾಂಬುದು ಪೂರ್ವದೋಪಾದಿ ಸಪ್ತವಾಹನ ನಿಖಿಳ ಜನರೊಳು ವ್ಯಾಪ್ತನು ಆದುದರಿಂದ ಸರ್ವರೂ ಆಪ್ತರು ಆಗಿಹರು ಎಲ್ಲ ಕಾಲದಿ ಕೈಕೊಂಡು||22|| ವಾರಿದನು ಮಳೆಗರೆಯೆ ಬೆಳೆದಿಹ ಭೂರುಹಂಗಳು ಚಿತ್ರ ಫಲರಸ ಬೇರೆ ಬೇರೆ ಇಪ್ಪಂತೆ ಬಹುವಿಧ ಜೀವರೊಳಗೆ ಇದ್ದು ಮಾರಮಣನು ಅವರವರ ಯೋಗ್ಯತೆ ಮೀರದಲೆ ಗುಣಕರ್ಮಗಳ ಅನುಸಾರ ನಡೆಸುವ ದೇವನಿಗೆ ವೈಷಮ್ಯವೆಲ್ಲಿಹುದೋ||23|| ವಾರಿಜಾಪ್ತನ ಕಿರಣ ಮಣಿಗಳ ಸೇರಿ ತತ್ತತ್ ವರ್ಣಗಳನು ವಿಕಾರಗೈಸದೆ ನೋಳ್ಪರಿಗೆ ಕಂಗೊಳಿಸುವಂದದಲಿ ಮಾರಮಣ ಲೋಕತ್ರಯದೊಳು ಇಹ ಮೂರುವಿಧ ಜೀವರೊಳಗೆ ಇದ್ದು ವಿಹಾರಮಾಡುವನು ಅವರ ಯೋಗ್ಯತೆ ಕರ್ಮವ ಅನುಸರಿಸಿ||24|| ಜಲವನು ಅಪಹರಿಸುವ ಘಳಿಗೆ ಬಟ್ಟಲನು ಉಳಿದು ಜಯಘಂಟೆ ಕೈಪಿಡಿದು ಎಳೆದು ಹೊಡೆವಂದದಲಿ ಸಂತತ ಕರ್ತೃ ತಾನಾಗಿ ಹಲಧರಾನುಜ ಪುಣ್ಯ ಪಾಪದ ಫಲಗಳನು ದೇವಾಸುರರ ಗಣದೊಳು ವಿಭಾಗವ ಮಾಡಿ ಉಣಿಸುತ ಸಾಕ್ಷಿಯಾಗಿಪ್ಪ||25|| ಪೊಂದಿಕೊಂಡಿಹ ಸರ್ವರೊಳು ಸಂಬಂಧವಾಗದೆ ಸಕಲಕರ್ಮವ ಅರಂದದಲಿ ತಾ ಮಾಡಿಮಾಡಿಪ ತತ್ಫಲಗಳುಣದೆ ಕುಂದದೆ ಅಣುಮಾಹತ್ತು ಎನಿಪ ಘಟಮಂದಿರದಿ ಸರ್ವತ್ರ ತುಂಬಿಹ ಬಾಂದಳದ ತೆರೆದಂತೆ ಇರುತಿಪ್ಪನು ರಮಾರಮಣ||26|| ಕಾದ ಕಬ್ಬಿಣ ಹಿಡಿದು ಬಡಿಯಲು ವೇದನೆಯು ಲೋಹಗಳಿಗೆ ಅಲ್ಲವೆ ಆದುದೇನೈ ಅನಳಗಾ ವ್ಯಥೆ ಏನು ಮಾಡಿದರು ಆದಿದೇವನು ಸರ್ವ ಜೀವರ ಕಾದುಕೊಂಡಿಹನು ಒಳಹೊರಗೆ ದುಃಖಾದಿಗಳು ಸಂಬಂಧವಾಗುವವೇನೋ ಚಿನ್ಮಯಗೆ||27|| ಮಳಲ ಮನೆಗಳ ಮಾಡಿ ಮಕ್ಕಳು ಕಾಲದಲಾಡಿ ಮೋದದಿ ತುಳಿದು ಕೆಡಿಸುವ ತೆರದಿ ಲಕ್ಷ್ಮೀರಮಣ ಲೋಕಗಳ ಹಲವು ಬಗೆಯಲಿ ನಿರ್ಮಿಸುವ ನಿಶ್ಚಲನು ತಾನಾಗಿದ್ದು ಸಲಹುವ ಎಲರುಣಿಯವೋಳ್ ನುಂಗುವಗೆ ಎಲ್ಲಿಹುದೋ ಸುಖ ದುಃಖ||28|| ವೇಷಭಾಷೆಗಳಿಂದ ಜನರ ಪ್ರಮೋಷಗೈಸುವ ನಟಪುರುಷನೋಳ್ ದೋಷದೂರನು ಲೋಕದೊಳು ಬಹುರೂಪ ಮಾತಿನಲಿ ತೋಷಿಸುವನು ಅವರವರ ಮನದ ಅಭಿಲಾಷೆಗಳ ಪೂರೈಸುತ ಅನುದಿನ ಪೋಷಿಸುವ ಪೂತಾತ್ಮ ಪೂರ್ಣ ಆನಂದ ಜ್ಞಾನಮಯ||29|| ಅಧಮ ಮಾನವನು ಓರ್ವ ಮಂತ್ರೌಷಧಗಳನು ತಾನರಿತು ಪಾವಕೋದಕಗಳ ಸಂಬಂಧವಿಲ್ಲದಲಿಪ್ಪನು ಅದರೊಳಗೆ ಪದುಮಜ ಅಂಡ ಉದರನು ಸರ್ವರ ಹೃದಯದೊಳಗೆ ಇರೆ ಕಾಲಗುಣಕರ್ಮದ ಕಲುಷ ಸಂಬಂಧವಾಗುವುದೇ ನಿರಂಜನಗೆ||30|| ಒಂದು ಗುಣದೊಳು ಅನಂತ ಗುಣಗಳು ಒಂದು ರೂಪದೊಳು ಇಹವು ಲೋಕಗಳ ಒಂದೇ ರೂಪದಿ ಧರಿಸಿ ತದ್ಗತ ಪದಾರ್ಥದ ಒಳ ಹೊರಗೆ ಬಾಂದಳದೊಳಿದ್ದು ಬಹು ಪೆಸರಿಂದ ಕರೆಸುತ ಪೂರ್ಣ ಜ್ನಾನಾನಂದಮಯ ಪರಿಪರಿ ವಿಹಾರವ ಮಾಡಿ ಮಾಡಿಸುವ||31|| ಎಲ್ಲರೊಳು ತಾನಿಪ್ಪ ತನ್ನೊಳಗೆ ಎಲ್ಲರನು ಧರಿಸಿಹನು ಅಪ್ರತಿಮಲ್ಲ ಮನ್ಮಥಜನಕ ಜಗದ ಆದಿ ಅಂತ ಮಧ್ಯಗಳ ಬಲ್ಲ ಬಹುಗುಣ ಭರಿತ ದಾನವ ದಲ್ಲಣ ಜಗನ್ನಾಥ ವಿಠಲ ಸೊಲ್ಲು ಲಾಲಿಸಿ ಸ್ತಂಭದಿಂದಲಿ ಬಂದ ಭಕುತನಿಗೆ||32||

Bannanje Govindacharya
Rs.238.00

B.N.K Sharma
Rs.1100.00

B.N.K Sharma
Rs.1445.00
*As an Amazon Associate, we earn from qualifying purchases
Advertisement
Banner Ad Space (728x90)