ಭೋಜನ ರಸ ವಿಭಾಗ ಸಂಧಿ
30 verses
ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು|| ವನಜಾಂಡದೊಳು ಉಳ್ಳ ಅಖಿಳ ಚೇತನರು ಭುಂಜಿಪ ಚತುರವಿಧ ಭೋಜನಪದಾರ್ಥದಿ ಚತುರವಿಧ ರಸರೂಪ ತಾನಾಗಿ ಮನಕೆ ಬಂದಂತೆ ಉಂಡು ಉಣಿಸಿ ಸಂಹನನಕೆ ಉಪಚಯ ಕರುಣಕೆ ಆನಂದ ಅನಿಮಿಷರಿಗೆ ಆತ್ಮ ಪ್ರದರ್ಶನ ಸುಖವನೀವ ಹರಿ||1|| ನೀಡದಂದದಲೆ ಇಪ್ಪ ಲಿಂಗಕೆ ಷೋಡಶ ಆತ್ಮಕ ರಸ ವಿಭಾಗವ ಮಾಡಿ ಷೋಡಶ ಕಲೆಗಳಿಗೆ ಉಪಚಯಗಳನೆ ಕೊಡುತ ಕ್ರೋಡ ಎಪ್ಪತ್ತೆರಡು ಸಾವಿರ ನಾಡಿಗತ ದೇವತೆಗಳೊಳಗೆ ಇದ್ದಾಡುತ ಆನಂದಾತ್ಮ ಚರಿಸುವ ಲೋಕದೊಳು ತಾನು||2|| ವಾರಿವಾಚ್ಯನು ವಾರಿಯೊಳಗಿದ್ದು ಆರು ರಸವೆಂದೆನಿಸಿ ಮೂವತ್ತಾರು ಸಾವಿರ ಸ್ತ್ರೀ ಪುರುಷನಾಡಿಯಲಿ ತದ್ರೂಪ ಧಾರಕನು ತಾನಾಗಿ ಸರ್ವ ಶರೀರಗಳಲಿ ಅಹಶ್ಚರಾತ್ರಿ ವಿಹಾರ ಮಾಳ್ಪನು ಬೃಹತಿಯೆಂಬ ಸುನಾಮದಿಂ ಕರೆಸಿ||3|| ಆರುರಸ ಸತ್ವಾದಿ ಭೇದದಿ ಆರು ಮೂರಾಗಿ ಇಹವು ಸಾರಾಸಾರನೀತ ಪ್ರಚುರ ಖಂಡಾಖಂಡ ಚಿತ್ಪ್ರಚುರ ಈರು ಅಧಿಕ ಎಪ್ಪತ್ತು ಸಾವಿರ ಮಾರಮಣನ ರಸಾಖ್ಯರೂಪ ಶರೀರದೊಳು ಭೋಜ್ಯ ಸುಪದಾರ್ಥದಿ ತಿಳಿದು ಭುಂಜಿಪುದು||4|| ಕ್ಷೀರಗತ ರಸ ರೂಪಗಳು ಮುನ್ನೂರು ಮೇಲೆ ಐವತ್ತು ನಾಲ್ಕು ಚಾರು ಘೃತಗತ ರೂಪಗಳು ಇಪ್ಪತ್ತರ ಒಂಭತ್ತು ಸಾರ ಗುಡದೊಳಗೆ ಐದು ಸಾವಿರ ನೂರಾವೊಂದು ಸುರೂಪ ದ್ವಿಸಹಸ್ರ ಆರೆರಡು ಶತ ಪಂಚ ವಿಂಶತಿ ರೂಪ ಫಲಗಳಲಿ||5|| ವಿಶದ ಸ್ಥಿರತೀಕ್ಷಣವು ನಿರ್ಹರ ರಸಗಳೊಳು ಮೂರೈದುಸಾವಿರ ತ್ರಿಶತ ನವರೂಪಗಳ ಚಿಂತಿಸಿ ಭುಂಜಿಪುದು ವಿಷಯ ಶ್ವಸನ ತತ್ತ್ವೇಶರೊಳಗಿದ್ದು ಈ ಪೆಸರಿನಿಂದಲಿ ಕರೆಸುವನು ಧೇನಿಸಿದರೀ ಪರಿ ಮನಕೆ ಪೊಳೆವನು ಬಲ್ಲ ವಿಬುಧರಿಗೆ||6|| ಕಪಿಲ ನರಹರಿ ಭಾರ್ಗವತ್ರಯ ವಪುಷ ನೇತ್ರದಿ ನಾಸಿಕಾಸ್ಯದಿ ಶಫರನಾಮಕ ಜಿಹ್ವೆಯಲಿ ದಂತದಲಿ ಹಂಸಾಖ್ಯ ತ್ರಿಪದಿಪಾದ್ಯ ಹಯಾಸ್ಯ ವಾಚ್ಯದೊಳು ಅಪರಿಮಿತ ಸುಖಪೂರ್ಣ ಸಂತತ ಕೃಪಣರೊಳಗಿದ್ದು ಅವರವರ ರಸ ಸ್ವೀಕರಿಸಿ ಕೊಡುವ||7|| ನಿರುಪಮಾನಂದಾತ್ಮ ಹರಿ ಸಂಕರುಷಣ ಪ್ರದ್ಯುಮ್ನರೂಪದಿ ಇರುತಿಹನು ಭೋಕ್ತ್ರುಗಳೊಳಗೆ ತತ್ಶಕ್ತಿದನುಯೆನಿಸಿ ಕರೆಸುವನು ನಾರಾಯಣ ಅನಿರುದ್ಧ ಎರಡುನಾಮದಿ ಭೋಜ್ಯವಸ್ತುಗನಿರುತ ತರ್ಪಕನಾಗಿ ತೃಪ್ತಿಯನೀವ ಚೇತನಕೆ||8|| ವಾಸುದೇವನು ಒಳ ಹೊರಗೆ ಅವಕಾಶ ಕೊಡುವ ನಭಸ್ಥನಾಗಿ ರಮಾಸಮೇತ ವಿಹಾರ ಮಾಳ್ಪನು ಪಂಚರೂಪದಲಿ ಆ ಸರೋರುಹ ಸಂಭವಭವವಾಸವಾದಿ ಅಮರಾದಿ ಚೇತನ ರಾಶಿಯೊಳಗೆ ಇಹನು ಎಂದರಿತವನು ಅವನೇ ಕೋವಿದನು||9|| ವಾಸುದೇವನು ಅನ್ನದೊಳು ನಾನಾ ಸುಭಕ್ಷ್ಯದಿ ಸಂಕರುಷಣ ಕೃತೀಶ ಪರಮಾನ್ನದೊಳು ಘೃತದೊಳಗೆ ಇಪ್ಪ ಅನಿರುದ್ಧ ಆ ಸುಪರ್ಣ ಅಂಸಗನು ಸೂಪದಿ ವಾಸವ ಅನುಜ ಶಾಕದೊಳು ಮೂಲೇಶ ನಾರಾಯಣನು ಸರ್ವತ್ರದಲಿ ನೆಲೆಸಿಹನು||10|| ಅಗಣಿತ ಆತ್ಮ ಸುಭೋಜನ ಪದಾರ್ಥಗಳ ಒಳಗೆ ಅಖಂಡ ವಾದ ಒಂದು ಅಗಳಿನೊಳು ಅನಂತ ಅಂಶದಲಿ ಖಂಡನೆಂದೆನಿಸಿ ಜಗದಿ ಜೀವರ ತೃಪ್ತಿ ಪಡಿಸುವ ಸ್ವಗತ ಭೇದ ವಿವರ್ಜಿತನ ಈರ್ಬಗೆಯ ರೂಪವನರಿತು ಭುಂಜಿಸಿ ಅರ್ಪಿಸು ಅವನಡಿಗೆ||11|| ಈ ಪರಿಯಲಿ ಅರಿತು ಉಂಬ ನರ ನಿತ್ಯ ಉಪವಾಸಿ ನಿರಾಮಯನು ನಿಷ್ಪಾಪಿ ನಿತ್ಯ ಮಹಾ ಸುಯಜ್ಞಗಳು ಆಚರಿಸಿದವನು ಪೋಪದು ಇಪ್ಪದು ಬಪ್ಪುದು ಎಲ್ಲ ರಮಾಪತಿಗೆ ಅಧಿಷ್ಠಾನವೆನ್ನು ಕೃಪಾಪಯೋನಿಧಿ ಮಾತಲಾಲಿಸುವನು ಜನನಿಯಂತೆ||12|| ಆರೆರೆಡು ಸಾವಿರದ ಮೇಲೆ ಇನ್ನೂರ ಐವತ್ತೊಂದು ರೂಪದಿ ಸಾರಭೋಕ್ತ ಅನಿರುದ್ಧ ದೇವನು ಅನ್ನಮಯನೆನಿಪ ಮೂರೆರೆಡುವರೆ ಸಾವಿರದ ಮೇಲೆ ಮೂರಧಿಕ ನಾಲ್ವತ್ತು ರೂಪದಿ ತೋರುತಿಹ ಪ್ರದ್ಯುಮ್ನ ಜಗದೊಳು ಪ್ರಾಣಮಯನಾಗಿ||13|| ಎರಡು ಕೋಶಗಳ ಒಳ ಹೊರಗೆ ಸಂಕರುಷಣ ಇದು ಸುಲಕ್ಷದ ಅರವತ್ತೆರೆಡು ಸಾವಿರದ ಏಳಧಿಕ ಶತ ರೂಪಗಳ ಧರಿಸಿ ಕರೆಸಿಕೊಂಬ ಮನೋಮಯ ಎಂದು ಅರವಿದೂರನು ಈರೆರೆಡು ಸಾವಿರದ ಮುನ್ನೂರು ಅದ ಮೇಲೆ ನಾಲ್ಕಧಿಕ ಎಪ್ಪತ್ತು||14|| ರೂಪದಿಂ ವಿಜ್ಞಾನಮಯನು ಎಂಬೀ ಪೆಸರಿನಿಂ ವಾಸುದೇವನು ವ್ಯಾಪಿಸಿಹ ಮಹದಾದಿ ತತ್ತ್ವದಿ ತತ್ಪತಿಗಳೊಳಗೆ ಈ ಪುರುಷ ನಾಮಕನ ಶುಭ ಸ್ವೇದಾಪಳು ಎನಿಸಿದ ರಮಾಂಬ ತಾ ಬ್ರಹ್ಮಾಪರೋಕ್ಷಿಗಳು ಆದವರ ಲಿಂಗಾಂಗ ಕೆಡಿಸುವಳು||15|| ಐದು ಸಾವಿರ ನೂರಿಪ್ಪತ್ತೈದು ನಾರಾಯಣ ರೂಪವ ತಾ ಧರಿಸಿಕೊಂಡು ಅನುದಿನದಿ ಆನಂದಮಯನೆನಿಪ ಐದು ಲಕ್ಷದ ಮೇಲೆ ಎಂಭತ್ತೈದುಸಾವಿರ ನಾಲ್ಕು ಶತಗಳ ಐದು ಕೋಶಾತ್ಮಕ ವಿರಿಂಚಾಡದೊಳು ತುಂಬಿಹನು||16|| ನೂರಾವೊಂದು ಸುರೂಪದಿಂ ಶಾಂತೀರಮಣ ತಾನು ಅನ್ನನೆನಿಪ ಐನೂರ ಮೇಲೆ ಮೂರಧಿಕ ದಶ ಪ್ರಾಣಾಖ್ಯ ಪ್ರದ್ಯುಮ್ನ ತೋರುತಿಹನು ಐವತ್ತೈದುಸಾವಿರ ವಿಕಾರ ಮನದೊಳು ಸಂಕರುಷಣ ಐನೂರ ಚತುರಾಶೀತಿ ವಿಜ್ಞಾನಾತ್ಮ ವಿಶ್ವಾಖ್ಯ||17|| ಮೂರು ಸಾವಿರದ ಅರ್ಧಶತ ಮೇಲೆ ಈರು ಅಧಿಕ ರೂಪಗಳ ಧರಿಸಿ ಶರೀರದೊಳಗೆ ಆನಂದಮಯ ನಾಯಾಯಣಾಹ್ವಯನು ಈರೆರೆಡು ಸಾವಿರದ ಮೇಲೆ ಮುನ್ನೂರ ಐದು ಸುರೂಪದಿಂದಲಿ ಭಾರತೀಶನೊಳು ಇಪ್ಪ ನವನೀತಸ್ಥ ಘೃತದಂತೆ||18|| ಮೂರಧಿಕ ಐವತ್ತು ಪ್ರಾಣ ಶರೀರದೊಳಗೆ ಅನಿರುದ್ಧನು ಇಪ್ಪ ಐನೂರು ಹನ್ನೊಂದು ಅಧಿಕ ಅಪಾನನೊಳು ಇಪ್ಪ ಪ್ರದ್ಯುಮ್ನ ಮೂರನೇ ವ್ಯಾನನೊಳಗೆ ಐದರೆ ನೂರು ರೂಪದಿ ಸಂಕರುಷಣ ಐನೂರ ಮೂವತ್ತೈದು ಉದಾನನೊಳು ಇಪ್ಪ ಮಾಯೇಶ||19|| ಮೂಲ ನಾರಾಯಣನು ಐವತ್ತೇಳಧಿಕ ಐನೂರು ರೂಪವ ತಾಳಿ ಸರ್ವತ್ರದಿ ಸಮಾನನೊಳಿಪ್ಪ ಸರ್ವಜ್ಞ ಲೀಲೆಗೈವನು ಸಾವಿರದ ಮೇಲೆ ಏಳು ನೂರು ಹನ್ನೊಂದು ರೂಪವ ತಾಳಿ ಪಂಚಪ್ರಾಣರೊಳು ಲೋಕಗಳ ಸಲಹುವನು||20|| ತ್ರಿನವತಿ ಸುರೂಪಾತ್ಮಕ ಅನಿರುದ್ಧನು ಸದಾ ಯಜಮಾನನಾಗಿದ್ದು ಅನಲ ಯಮ ಸೋಮಾದಿ ಪಿತೃದೇವತೆಗಳಿಗೆ ಅನ್ನನು ಎನಿಪನು ಆ ಪ್ರದ್ಯುಮ್ನ ಸಂಕರುಷಣ ವಿಭಾಗವ ಮಾಡಿಕೊಟ್ಟು ಉಂಡುಣಿಪ ನಿತ್ಯಾನಂದ ಭೋಜನದಾಯಿ ತುರ್ಯಾಹ್ವ||21|| ಷಣ್ಣವತಿ ನಾಮಕನು ವಸು ಮೂಗಣ್ಣ ಭಾಸ್ಕರರ ಒಳಗೆ ನಿಂತು ಪ್ರಾಪನ್ನರು ಅನುದಿನ ನಿಷ್ಕಪಟ ಸದ್ಭಕ್ತಿಯಲಿ ಮಾಳ್ಪ ಪುಣ್ಯ ಕರ್ಮವ ಸ್ವೀಕರಿಸಿ ಕಾರುಣ್ಯ ಸಾಗರನು ಆ ಪಿತೃಗಳಿಗೆ ಅಗಣ್ಯ ಸುಖವಿತ್ತು ಅವರ ಪೊರೆವನು ಎಲ್ಲ ಕಾಲದಲಿ||22|| ಸುತಪ ಏಕ ಉತ್ತರ ಸುಪಂಚಾಶತ ವರಣ ಕರಣದಿ ಚತುರ ವಿಂಶತಿ ಸುತತ್ವದಿ ಧಾತುಗಳೊಳು ಇದ್ದು ಅವಿರತ ಅನಿರುದ್ಧ ಜತನ ಮಾಳ್ಪನು ಜಗದಿ ಜೀವ ಪ್ರತತಿಗಳ ಷಣ್ಣವತಿ ನಾಮಕ ಚತುರ ಮೂರ್ತಿಗಳ ಅರ್ಚಿಸುವರು ಅದರಿಂದ ಬಲ್ಲವರು||23|| ಅಬುಜಾಂಡ ಉದರನು ವಿಪಿನದಿ ಶಬರಿ ಯಂಜಲನುಂಡ ಗೋಕುಲದ ಅಬಲೆಯರನು ಓಲಿಸಿದನು ಋಷಿಪತ್ನಿಯರು ಕೊಟ್ಟನ್ನ ಸುಭುಜ ತಾ ಭುಂಜಿಸಿದ ಸ್ವರಮಣ ಕುಬುಜಗಂಧಕೊಲಿದ ಮುನಿಗಣ ವಿಬುಧ ಸೇವಿತ ಬಿಡುವನೆ ನಾವು ಇತ್ತ ಕರ್ಮಫಲ||24|| ಗಣನೆಯಿಲ್ಲದ ಪರಮಸುಖ ಸುದ್ಗುಣ ಗಣಂಗಳ ಲೇಶ ಲೇಶಕೆ ಎಣೆಯೆನಿಸದು ರಮಾಬ್ಜಭವ ಶಕ್ರಾದಿಗಳ ಸುಖವು ಉಣುತ ಉಣುತ ಮೈಮರೆದು ಕೃಷ್ಣಾರ್ಪಣವೆನಲು ಕೈಕೊಂಬನು ಅರ್ಭಕ ಜನನಿ ಭೋಜನ ಸಮಯದಲಿ ಕೈವಡ್ದು ವಂದದಲಿ||25|| ಜೀವಕೃತ ಕರ್ಮಗಳ ಬಿಡದೆ ರಮಾವರನು ಸ್ವೀಕರಿಸಿ ಫಲಗಳನು ಈವನು ಅಧಿಕಾರಾನುಸಾರದಲಿ ಅವರಿಗೆ ಅನವರತ ಪಾವಕನು ಸರ್ವಸ್ವ ಭುಂಜಿಸಿ ತಾ ವಿಕಾರವನು ಐದನು ಒಮ್ಮೆಗೆ ಪಾವನಕೆ ಪಾವನನೆನಿಪ ಹರಿಯುಂಬುದು ಎನರಿದು||26|| ಕಳುಷಜಿಹ್ವೆಗೆ ಸುಷ್ಟುಭೋಜನ ಜಲ ಮೊದಲು ವಿಷತೋರುವುದು ನಿಷ್ಕಲುಷ ಜಿಹ್ವೆಗೆ ಸುರಸ ತೋರುವುದು ಎಲ್ಲ ಕಾಲದಲಿ ಸುಲಲಿತಾಂಗಗೆ ಸಕಲ ರಸ ಮಂಗಳವೆನಿಸುತಿಹುದು ಅನ್ನಮಯ ಕೈಕೊಳದೆ ಬಿಡುವನೆ ಪೂತನಿಯ ವಿಷ ಮೊಲೆಯನು ಉಂಡವನು||27|| ಪೇಳಲಿ ಏನು ಸಮೀರ ದೇವನು ಕಾಳಕೂಟವನು ಉಂಡು ಲೋಕವ ಪಾಲಿಸಿದ ತದ್ದಾಸನು ಓರ್ವನು ಅಮೃತನೆನಿಸಿದನು ಶ್ರೀ ಲಕುಮಿವಲ್ಲಭ ಶುಭಾಶುಭ ಜಾಲ ಕರ್ಮಗಳ ಉಂಬನು ಉಪಚಯದ ಏಳಿಗೆಗಳು ಇವಗಿಲ್ಲವೆಂದಿಗು ಸ್ವರಸಗಳ ಬಿಟ್ಟು||28|| ಈ ಪರಿಯಲಿ ಅಚ್ಯುತನ ತತ್ತದ್ರೂಪ ತನ್ನಾಮಗಳ ಸಲೆ ನಾನಾ ಪದಾರ್ಥದಿ ನೆನೆನೆನೆದು ಭುಂಜಿಸುತಲಿ ಇರು ವಿಷಯ ಪ್ರಾಪಕ ಸ್ಥಾಪಕ ನಿಯಾಮಕ ವ್ಯಾಪಕನು ಎಂದರಿದು ನೀ ನಿರ್ಲೇಪನು ಆಗಿರು ಪುಣ್ಯ ಪಾಪಗಳ ಅರ್ಪಿಸು ಅವನ ಅಡಿಗೆ||29|| ಐದು ಲಕ್ಷ ಎಂಭತ್ತರ ಒಂಭತ್ತು ಆದ ಸಾವಿರದ ಏಳುನೂರರ ಐದು ರೂಪವ ಧರಿಸಿ ಭೋಕ್ತ್ರುಗ ಭೋಜ್ಯನೆಂದೆನಿಸಿ ಶ್ರೀಧರಾದುರ್ಗಾರಮಣ ಪಾದಾದಿ ಶಿರ ಪರ್ಯಂತ ವ್ಯಾಪಿಸಿ ಕಾದು ಕೊಂಡಿಹ ಸಂತತ ಜಗನ್ನಾಥ ವಿಠಲನು||30||

Bannanje Govindacharya
Rs.238.00

B.N.K Sharma
Rs.1100.00

B.N.K Sharma
Rs.1445.00
*As an Amazon Associate, we earn from qualifying purchases
Advertisement
Banner Ad Space (728x90)