ಪಂಚ ಮಹಾಯಜ್ಞ ಸಂಧಿ
35 verses
ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು|| ಜನನಿಪಿತಭೂವಾರಿದಾಂಬರವೆನಿಪ ಪಂಚಾಗ್ನಿಯಲಿ ನಾರಾಯಣನ ತ್ರಿಂಶತಿ ಮೂರ್ತಿಗಳ ವ್ಯಾಪಾರ ವ್ಯಾಪ್ತಿಗಳ ನೆನೆದು ದಿವಸಾಳು ಎಂಬ ಸಮಿಧೆಗಳು ನಿರಂತರ ಹೋಮಿಸುತ ಪಾವನಕೆ ಪಾವನನು ಎನಿಪ ಪರಮನ ಬೇಡು ಪರಮಸುಖ||1|| ಗಗನ ಪಾವಕ ಸಮಿಧೆ ರವಿ ರಶ್ಮಿಗಳೇ ಧೂಮವು ಅರ್ಚಿಯೆನಿಪುದು ಹಗಲು ನಕ್ಷತ್ರಗಳು ಕಿಡಿಗಳು ಚಂದ್ರಮ ಅಂಗಾರ ಮೃಗವರ ಉದರನೊಳಗೆ ಐದು ರೂಪಗಳ ಚಿಂತಿಸಿ ಭಕ್ತಿರಸ ಮಾತುಗಳೆ ಮಂತ್ರವ ಮಾಡಿ ಹೋಮಿಸುವರು ವಿಪಶ್ಚಿತರು||2|| ಪಾವಕನು ಪರ್ಜನ್ಯ ಸಮಿಧೆಯು ಪ್ರಾವಹೀಪತಿ ಧೂಮಗಳು ಮೇಘಾವಳಿಗಳು ಅರ್ಚಿ ಕ್ಷಣಪ್ರಭೆ ಗರ್ಜನವೆ ಕಿಡಿಯು ಭಾವಿಸುವುದು ಅಂಗಾರ ಸಿಡಿಲೆಂದು ಈ ವಿಧ ಅಗ್ನಿಯೊಳು ಅಬ್ಧಿ ಜಾತನ ಕೋವಿದರು ಹೋಮಿಸುವರು ಅನುದಿನ ಪರಮ ಭಕುತಿಯಲಿ||3|| ಧರಣಿಯೆಂಬುದೇ ಅಗ್ನಿ ಸಂವತ್ಸರವೇ ಸಮಿಧೆ ವಿಹಾಯಸವೇ ಪೊಗೆ ಇರಳು ಉರಿ ದಿಶ ಅಂಗಾರ ಅವಾಂತರ ದಿಗ್ವಲಯ ಕಿಡಿಯು ವರುಷವೆಂಬ ಆಹುತಿಗಳಿಂದಲಿ ಹರಿಯ ಮೆಚ್ಚಿಸಿ ಸಕಲರೊಳಗೆ ಅಧ್ವರಿಯನಾಗಿರು ಸರ್ವ ರೂಪಾತ್ಮಕನ ಚಿಂತಿಸುತ||4|| ಪುರುಷ ಶಿಖಿ ವಾಕ್ಸಮಿಧೆ ಧೂಮವು ಪರಣ ಅರ್ಚಿಯು ಜಿಹ್ವೆ ಶ್ರೋತ್ರಗಳು ಎರಡು ಕಿಡಿಗಳು ಲೋಚನಗಳು ಅಂಗಾರವೆನಿಸುವುವು ನಿರುತ ಭುಂಜಿಸುವನ್ನ ಯದುಕುಲವರನಿಗೆ ಅವದಾನಗಳೆಂದು ಈ ಪರಿ ಸಮರ್ಪಣೆಗೈಯೆ ಕೈಗೊಂಡು ಅನುದಿನದಿ ಪೊರೆವ||5|| ಮತ್ತೆ ಯೋಷ ಅಗ್ನಿಯೊಳು ತಿಳಿವುದು ಉಪಸ್ಥ ತತ್ತ್ವವೆ ಸಮಿಧೆ ಕಾಮೋತ್ಪತ್ತಿ ಪರಮಾತುಗಳು ಧೂಮವು ಯೋನಿ ಮಹದರ್ಚಿ ತತ್ಪ್ರವೇಶ ಅಂಗಾರ ಕಿಡಿಗಳು ಉತ್ಸಹ ಉತ್ಸರ್ಜನವೆ ಪುರುಷೋತ್ತಮನಿಗೆ ಅವದಾನವನೆ ಕೈಕೊಂಡು ಮನ್ನಿಸುವ||6|| ಐದಗ್ನಿಗಳಲ್ಲಿ ಮರೆಯದೆ ಐದು ರೂಪಾತ್ಮಕನ ಇಪ್ಪತ್ತೈದು ರೂಪಗಳ ಅನುದಿನದಿ ನೆನೆವರಿಗೆ ಜನ್ಮಗಳ ಐದಿಸನು ನಳಿನಾಕ್ಷ ರಣದೊಳು ಮೈದುನನ ಕಾಯ್ದಂತೆ ಸಲಹುವ ಬೈದವಗೆ ಗತಿಯಿತ್ತ ಭಯಹರ ಭಕ್ತವತ್ಸಲನು||7|| ಪಂಚನಾರೀ ತುರಗದಂದದಿ ಪಂಚರೂಪಾತ್ಮಕನು ತಾ ಷಟ್ಪoಚ ರೂಪವ ಧರಿಸಿ ತತ್ತನ್ನಾಮದಿಂ ಕರೆಸಿ ಪಂಚ ಪಾವಕ ಮುಖದಿ ಗುಣಮಯ ಪಂಚಭೂತಾತ್ಮಕ ಶರೀರವ ಪಂಚ ವಿಧ ಜೀವರಿಗೆ ಕೊಟ್ಟು ಅಲ್ಲಲ್ಲೆ ರಮಿಸುವನು||8|| ವಿಧಿ ಭವಾದಿ ಸಮಸ್ತ ಜೀವರ ಹೃದಯದೊಳಗೆ ಏಕಾತ್ಮನೆನಿಸುವ ಪದುಮನಾಭನು ಅಚ್ಯುತಾನಂತಾದಿರೂಪದಲಿ ಅಧಿಸುಭೂತಾಧ್ಯಾತ್ಮವ ಅಧಿದೈವದೊಳು ಕರೆಸುವ ಪ್ರಾಣನಾಗಾಭಿದನು ದಶರೂಪದಲಿ ದಶವಿಧ ಪ್ರಾಣರೊಳಗಿದ್ದು||9|| ಈರೈದು ಸಾವಿರದ ಇಪ್ಪತ್ತು ಆರಧಿಕ ಮುನ್ನೂರು ರೂಪಗಳ ಈರೆರೆಡು ಸ್ಥಾನದಲಿ ಚಿಂತಿಪುದು ಅನುದಿನದಿ ಬುಧರು ನೂರಿಪ್ಪತ್ತೇಳು ಅಧಿಕ ಮೂರಾರುಸಾವಿರ ರೂಪದಿಂ ದಶ ಮಾರುತರೊಳಿದ್ದು ಅವರವರ ಪೆಸರಿಂದ ಕರೆಸುವನು||10|| ಚಿತ್ತೈಸುವುದು ಎಂಟಧಿಕ ಇಪ್ಪತ್ತು ಸಾವಿರ ನಾಲ್ಕು ಶತದ ಇಪ್ಪತ್ತಮೂರು ಸುಮೂರ್ತಿಗಳು ಅಹವಲ್ಲೇ ಪರಿಯಂತ ಹತ್ತು ನಾಲ್ಕು ರೂಪಗಳ ನೆರೆಬಿತ್ತವರೀಪರಿ ತಿಳಿದು ಪುರುಷೋತ್ತಮನ ಸರ್ವತ್ರ ಪೂಜೆಯ ಮಾಡು ಕೊಂಡಾಡು||11|| ಈರೆರೆಡು ಶತದ್ವಿಷ್ಟ ಅಧಿಕ ಹದಿನಾರು ಸಾವಿರ ರೂಪ ಸರ್ವ ಶರೀರದೊಳು ಶಬ್ಧಾದಿಗಳ ಅಧಿಷ್ಠಾನದೊಳಗೆ ಇಪ್ಪ ಮಾರುತನು ನಾಗಾದಿ ರೂಪದಿ ಮೂರನೇ ಗುಣಮಾನಿ ಶ್ರೀ ದುರ್ಗಾರಮಣ ವಿದ್ಯಾಕುಮೋಹವ ಕೊಡುವ ಕರಣಕ್ಕೆ||12|| ಐದವಿದ್ಯೆಗಳೊಳಗೆ ಇಹ ನಾಗಾದಿಗಳ ಅಧಿಷ್ಠಾನದಲಿ ಲಕ್ಷ್ಮೀಧವನು ಕೃದ್ಧೋಲ್ಕ ಮೊದಲಾದ ಐದು ರೂಪಗಳ ತಾ ಧರಿಸಿ ಸಜ್ಜನರ ಅವಿದ್ಯವ ಛೇದಿಸುವ ತಾಮಸರಿಗೆ ಅಜ್ಞಾನಾದಿಗಳ ಕೊಟ್ಟು ಅವರವರ ಸಾಧನವ ಮಾಡಿಸುವ||13|| ಗೋವುಗಳೊಳು ಉದ್ಗೀಥನಿಹ ಪ್ರಸ್ಥಾವ ಹಿಂಕಾರ ಎರಡೂ ರೂಪದಿ ಅವ್ಯಾಜಗಳೊಳಿಹನು ಪ್ರತಿಹಾರಾಹ್ವ ಹಯಗಳೊಳು ಜೀವನಪ್ರದ ನಿಧನ ಮನುಜರೊಳು ಈ ವಿಧದೊಳಿಹ ಪಂಚ ಸಾಮವ ಝಾವ ಝಾವಕೆ ನೆನೆವರಿಗೆ ಐದಿಸನು ಜನ್ಮಗಳ||14|| ಯುಗ ಚತುಷ್ಟಯಗಳಲಿ ತಾನಿದ್ದು ಯುಗ ಪ್ರವರ್ತಕ ಧರ್ಮ ಕರ್ಮಗಳಿಗೆ ಪ್ರವರ್ತಕ ವಾಸುದೇವಾದಿ ಈರೆರೆಡು ರೂಪ ತೆಗೆದುಕೊಂಡು ಯುಗಾದಿ ಕೃತು ತಾ ಯುಗ ಪ್ರವರ್ತಕಯೆನಿಸಿ ಧರ್ಮ ಪ್ರಘಟಕನು ತಾನಾಗಿ ಭಕುತರಿಗೀವ ಸಂಪದವ||15|| ತಲೆಯೊಳಿಹ ನಾರಾಯಣನು ಗಂಟಲಡಿ ಒಡಲೊಳು ವಾಸುದೇವನು ಬಲದಲಿಹ ಪ್ರದ್ಯುಮ್ನ ಎಡ ಭಾಗದಲಿ ಅನಿರುದ್ಧ ಕೆಳಗಿನ ಅಂಗದಿ ಸಂಕರುಷಣನ ತಿಳಿದು ಈ ಪರಿ ಸಕಲ ದೇಹಗಳೊಳಗೆ ಪಂಚಾತ್ಮಕನ ರೂಪವ ನೋಡು ಕೊಂಡಾಡು||16|| ತನು ವಿಶಿಷ್ಟದಿ ಇಪ್ಪ ನಾರಾಯಣನು ಕಟಿ ಪಾದ ಅಂತ ಸಂಕರುಷಣನು ಶಿರ ಜಘನ ಅಂತವಾಗಿಹ ವಾಸುದೇವಾಖ್ಯ ಅನಿಮಿಷ ಈಷ ಅನಿರುದ್ಧ ಪ್ರದ್ಯುಮ್ನನ್ನು ಎಡದಿ ಬಲ ಭಾಗದಿ ಚಿಂತನೆಯ ಮಾಳ್ಪರಿಗೆ ಉಂಟೆ ಮೈಲಿಗೆ ವಿಧಿ ನಿಷೇಧಗಳು||17|| ಪದುಮನಾಭನು ಪಾಣಿಯೊಳಗಿಹ ವದನದಲಿ ಹೃಷಿಕೇಶ ನಾಸಿಕ ಸದನದಲಿ ಶ್ರೀಧರನು ಜಿಹ್ವೆಯೊಳು ಇಪ್ಪ ವಾಮನನು ವಿದಿತ ನೇತ್ರದಿ ತ್ರಿವಿಕ್ರಮನು ತ್ವಕ್ದೇಶದೊಳಗಿಹ ಕರ್ಣದಲಿ ಇಪ್ಪನು ವಿಷ್ಣುನಾಮಕ ಶ್ರವಣನೆಂದೆನಿಸಿ||18|| ಮನದೊಳಿಹ ಗೋವಿಂದ ಮಾಧವ ಧನಪ ಸಖ ತತ್ವದೊಳು ನಾರಾಯಣ ಮಹತ್ತತ್ವದೊಳು ಅವ್ಯಕ್ತದೊಳು ಕೇಶವನು ಇನಿತು ರೂಪವ ದೇಹದೊಳು ಚಿಂತನೆಯ ಗೈವ ಮಹಾತ್ಮರು ಇಳೆಯೊಳು ಮನುಜರು ಅವರಲ್ಲ ಅಮರರೇ ಸರಿ ಹರಿಕೃಪಾಬಲದಿ||19|| ನೆಲದೊಳು ಇಪ್ಪನು ಕೃಷ್ಣ ರೂಪದಿ ಜಲದೊಳು ಇಪ್ಪನು ಹರಿಯೆನಿಸಿ ಶಿಖಿಯೊಳಗೆ ಇಪ್ಪನು ಪರಶುರಾಮ ಉಪೆನ್ದ್ರನು ಎಂದೆನಿಸಿ ಎಲ್ಲರೊಳು ಇಪ್ಪನು ಜನಾರ್ಧನನು ಬಾಂದಲದೊಳು ಅಚ್ಯುತ ಗಂಧ ನರಹರಿ ಪೊಳೆವ ಅಧೋಕ್ಷಜ ರಸಗಳೊಳು ರಸರೂಪ ತಾನಾಗಿ||20|| ರೂಪ ಪುರುಷೋತ್ತಮನು ಸ್ಪರ್ಶ ಪ್ರಾಪಕನು ಅನಿರುದ್ಧ ಶಬ್ಧದಿ ವ್ಯಾಪಿಸಿಹ ಪ್ರದ್ಯುಮ್ನ ಉಪಸ್ಥದಿ ವಾಸುದೇವನಿಹ ತಾ ಪೊಳೆವ ಪಾಯುಸ್ಥನಾಗಿ ಜಯಾಪತಿಯು ಸಂಕರುಷಣನು ಸುಸ್ಥಾಪಕನೆನಿಸಿ ಪಾದದೊಳು ದಾಮೋದರನು ಪೊಳೆವ||21|| ಚತುರ ವಿಂಶತಿ ತತ್ತ್ವದೊಳು ಶ್ರೀಪತಿಯೆ ಅನಿರುದ್ಧಾದಿ ರೂಪದಿ ವಿದಿತನಾಗಿದ್ದು ಅಖಿಲ ಜೀವರ ಸಂಹನನದೊಳಗೆ ಪ್ರತತಿಯಂದದಿ ಸುತ್ತು ಸುತ್ತುತ ಪಿತೃಗಳಿಗೆ ತರ್ಪಕನೆನಿಸಿಕೊಂಡು ಅತುಳ ಮಹಿಮನು ಷಣ್ಣವತಿ ನಾಮದಲಿ ನೆಲೆಸಿಹನು||22|| ಚತುರ ವಿಂಶತಿ ತತ್ತ್ವದೊಳು ತತ್ಪತಿಗಳೆನಿಸುವ ಬ್ರಹ್ಮ ಮುಖ ದೇವತೆಗಳೊಳು ಹನ್ನೊಂದು ನೂರೈವತ್ತೆರಡು ರೂಪ ವಿತತನಾಗಿದ್ದೆಲ್ಲ ಜೀವರ ಜತನ ಮಾಡುವ ಗೋಸುಗ ಜಗತ್ಪತಿಗೆ ಏನಾದರೂ ಪ್ರಯೋಜನವಿಲ್ಲವಿದರಿಂದ||23|| ಇಂದಿರಾಧವ ಶಕ್ತಿ ಮೊದಲಾದ ಒಂದಧಿಕದಶ ರೂಪದಿಂದಲಿ ಪೊಂದಿಹನು ಸಕಲ ಇಂದ್ರಿಯಗಳಲ್ಲಿ ಪುರುಷನಾಮಕನು ಸುಂದರಪ್ರದ ಪೂರ್ಣಜ್ಞಾನಾನಂದಮಯ ಚಿತ್ದೇಹದೊಳು ತಾನೊಂದರೆಕ್ಷಣ ವಗಲದಲೆ ಪರಮಾಪ್ತನು ಆಗಿಪ್ಪ||24|| ಆರಧಿಕ ದಶ ರೂಪದಿಂದಲಿ ತೋರುತ ಇಪ್ಪನು ವಿಶ್ವ ಲಿಂಗಶರೀರದೊಳು ತೈಜಸನು ಪ್ರಾಜ್ಞನು ತುರ್ಯನಾಮಕನು ಮೂರೈದು ರೂಪಗಳ ಧರಿಸುತಲಿ ಈರೈದು ಕರಣದೊಳು ಮಾತ್ರದಿ ಖೈರ ಶಿಖಿ ಜಲ ಭೂಮಿಯೊಳಗಿಹನು ಆತ್ಮನಾಮದಲಿ||25|| ಮನದೊಳು ಅಹಂಕಾರದೊಳು ಚಿಂತನೆಯ ಮಾಳ್ಪುದು ಅಂತರಾತ್ಮನ ಘನ ಸುತತ್ತ್ವದಿ ಪರಮನ ಅವ್ಯಕ್ತದಲಿ ಜ್ಞಾನಾತ್ಮ ಇನಿತು ಪಂಚಾಶಯ್ವರಣ ವೇದ್ಯನ ಅಜಾದ್ಯೈವತ್ತು ಮೂರ್ತಿಗಳನು ಸದಾ ಸರ್ವತ್ರ ದೇಹಗಳಲ್ಲಿ ಪೂಜಿಪುದು||26|| ಚತುರ ವಿಂಶತಿ ತತ್ತ್ವದೊಳು ತತ್ಪತಿಗಳೆನಿಸುವ ಬ್ರಹ್ಮ ಮುಖ ದೇವತೆಗಳೊಳು ಹದಿಮೂರು ಸಾವಿರದ ಎಂಟು ನೂರಧಿಕ ಚತುರ ವಿಂಶತಿ ರೂಪದಿಂದಲಿ ವಿತತನಾಗಿದ್ದು ಎಲ್ಲರೊಳು ಪ್ರಾಕೃತ ಪುರುಷನಂದದಲಿ ಪಂಚಾತ್ಮಕನು ರಮಿಸುವನು||27|| ಕೇಶವಾದಿ ಸುಮೂರ್ತಿ ದ್ವಾದಶ ಮಾಸ ಪುಂಡ್ರಗಳಲ್ಲಿ ವೇದವ್ಯಾಸ ಅನಿರುದ್ಧಾದಿ ರೂಪಗಳು ಆರು ಋತುಗಳಲಿ ವಾಸವಾಗಿಹನೆಂದು ತ್ರಿಂಶತಿ ವಾಸರದಿ ಸತ್ಕರ್ಮ ಧರ್ಮ ನಿರಾಶೆಯಿಂದಲಿ ಮಾಡು ಕರುಣವ ಬೇಡು ಕೊಂಡಾಡು||28|| ಲೋಷ್ಠ ಕಾಂಚನ ಲೋಹ ಶೈಲಜ ಕಾಷ್ಠ ಮೊದಲಾದ ಅಖಿಳ ಜಡ ಪರಮೇಷ್ಠಿ ಮೊದಲಾದ ಅಖಿಳ ಚೇತನರೊಳಗೆ ಅನುದಿನವು ಚೇಷ್ಟೆಗಳ ಮಾಡಿಸುತ ತಿಳಿಸದೆ ಪ್ರೇಷ್ಟನಾಗಿದ್ದು ಎಲ್ಲರಿಗೆ ಸರ್ವೇಷ್ಟ ಆದಾಯಕ ಸಂತೈಸುವನು ಸರ್ವ ಜೀವರನು||29|| ವಾಸುದೇವಾನಿರುದ್ಧ ರೂಪದಿ ಪುಂ ಶರೀರದೊಳಿಹನು ಸರ್ವದ ಸ್ತ್ರೀ ಶರೀರದೊಳಿಹನು ಸಂಕರುಷಣನು ಪ್ರದ್ಯುಮ್ನ ದ್ವಾಸುಪರ್ಣ ಶ್ರುತಿ ವಿನುತ ಸರ್ವಸುನಿಲ ನಾರಾಯಣನ ಸದುಪಾಸನೆಯ ಗೈವರರು ಜೀವನ್ಮುಕ್ತರು ಎನಿಸುವರು||30|| ತನ್ನನಂತ ಅನಂತ ರೂಪ ಹಿರಣ್ಯ ಗರ್ಭಾದಿಗಳೊಳಗೆ ಕಾರುಣ್ಯ ಸಾಗರ ಹರಹಿ ಅವರವರ ಅಖಿಳ ವ್ಯಾಪಾರ ಬನ್ನಬಡದಲೆ ಮಾಡಿ ಮಾಡಿಸಿ ಧನ್ಯರೆನಿಸಿ ಸಮಸ್ತ ದಿವಿಜರ ಪುಣ್ಯಕರ್ಮವ ಸ್ವೀಕರಿಸಿ ಸುಖವಿತ್ತು ಪಾಲಿಸುವ||31|| ಸಾಗರದೊಳಿಹ ನದಿಯ ಜಲ ಭೇದ ಆಗಸದೊಳು ಇಪ್ಪ ಅಬ್ದ ಬಲ್ಲವು ಕಾಗೆ ಗುಬ್ಬಿಗಳು ಅರಿಯ ಬಲ್ಲವೇ ನದಿಯ ಜಲಸ್ಥಿತಿಯ ಭೋಗಿವರ ಪರಿಯಂಕ ಶಯನನೊಳು ಈ ಗುಣತ್ರಯ ಬದ್ಧ ಜಗವಿಹುದು ಆಗಮಜ್ಞರು ತಿಳಿವರು ಅಜ್ಞಾನಿಗಳಿಗೆ ಅಳವಡದು||32|| ಕರಣ ಗುಣ ಭೂತಗಳೊಳಗೆ ತದ್ವರನೆನಿಪ ಬ್ರಹ್ಮಾದಿ ದಿವಿಜರೊಳರಿತು ರೂಪ ಚತುಷ್ಟಯಗಳ ಅನುದಿನದಿ ಸರ್ವತ್ರ ಸ್ಮರಿಸುತ ಅನುಮೋದಿಸುತ ಹಿಗ್ಗುತ ಪರವಶದಿ ಪಾಡುವರಿಗೆ ತನ್ನಿರವ ತೋರಿಸಿ ಭವವಿಮುಕ್ತರ ಮಾಡಿ ಪೋಷಿಸುವ||33|| ಮೂಲರೂಪನು ಮನದೊಳಿಹ ಶ್ರವಣ ಆಲಿಯೊಳಗಿಹ ಮತ್ಸ್ಯ ಕೂರ್ಮನು ಕೋಲರೂಪನು ತ್ವಕ್ರಸನದೊಳಗೆ ಇಪ್ಪ ನರಸಿಂಹ ಬಾಲವಟು ವಾಮನನು ನಾಸಿಕ ನಾಳದೊಳು ವದನದಲಿ ಭಾರ್ಗವ ವಾಲಿಭಂಜನ ಹಸ್ತದೊಳು ಪಾದ ಶ್ರೀ ಕೃಷ್ಣ||34|| ಜಿನ ವಿಮೋಹಕ ಬುದ್ಧ ಪಾಯುಗ ದನುಜ ಭಂಜನ ಕಲ್ಕಿ ಮೇಡ್ರದಿ ಇನಿತು ದಶ ರೂಪಗಳ ದಶ ಕರಣಂಗಳಲಿ ತಿಳಿದು ಅನುಭವಿಪ ವಿಷಯಂಗಳು ಕೃಷ್ಣಾರ್ಪಣವೆನಲು ಕೈಕೊಂಬ ವೃಜಿನ ಅರ್ದನ ವರ ಜಗನ್ನಾಥ ವಿಠಲ ವಿಶ್ವ ವ್ಯಾಪಕನು||35||

Bannanje Govindacharya
Rs.238.00

B.N.K Sharma
Rs.1100.00

B.N.K Sharma
Rs.1445.00
*As an Amazon Associate, we earn from qualifying purchases
Advertisement
Banner Ad Space (728x90)