ಪಂಚತನ್ಮಾತ್ರ ಸಂಧಿ
33 verses
ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು|| ಭೂಸಲಿಲ ಶಿಖಿ ಪವನ ಭೂತ ಆಕಾಶದೊಳಗೆ ಐದೈದು ತನ್ಮಾತ್ರಾ ಸಹಿತ ಒಂದಧಿಕ ಪಂಚಾಶತ್ ವರಣ ವೇದ್ಯ ಈ ಶರೀರದಿ ವ್ಯಾಪಿಸಿದ್ದು ಸುರಾಸುರರಿಗೆ ನಿರಂತರದಲಿ ಸುಖಾಸುಖಪ್ರದನಾಗಿ ಆಡುವ ದ್ವೇಷಿಪರ ಬಡಿವ||1|| ಪ್ರಣವ ಪ್ರತಿಪಾದ್ಯ ತ್ರಿನಾಮದಿ ತನುವಿನೊಳು ತ್ರಿಸ್ಥಾನಗ ಅನಿರುದ್ಧನು ತ್ರಿಪಂಚಕ ಏಕ ವಿಂಶತಿ ಚತುರ ವಿಂಶತಿಗನು ಎನಿಸಿ ಎಪ್ಪತ್ತೆರಡು ಸಾವಿರ ಇನಿತು ನಾಡಿಗಳೊಳು ನಿಯಾಮಿಸುತ ಇನ ಭಸ್ತಿಗ ಲೋಕದೊಳು ಸರ್ವತ್ರ ಬೆಳಗುವನು||2|| ಜೀವಲಿಂಗಾನಿರುದ್ಧ ಸ್ಥೂಲ ಕಳೇವರಗಳಲಿ ವಿಶ್ವತುರಗಗ್ರೀವ ಮೂಲೇಶ ಅಚ್ಯುತತ್ರಯ ಹಂಸ ಮೂರ್ತಿಗಳ ಈ ವಿಧ ಚತು: ಸ್ಥಾನದಲಿ ಶಾಂತೀವರನ ಈರೆರಡು ರೂಪದಿ ಭಾವಿಸುವುದು ಏಕ ಊನ ವಿಂಶತಿ ಮೂರ್ತಿ ಸರ್ವತ್ರ||3|| ಕಲುಷವಿಲ್ಲದ ದರ್ಪಣದಿ ಪ್ರತಿಫಲಿಸಿ ಸರ್ವ ಪದಾರ್ಥಗಳು ಕಂಗೊಳಿಸುವಂದದಲಿ ಬಿಂಬ ಜಡ ಚೇತನಗಳೊಳಗಿದ್ದು ಪೊಳೆವ ಬಹುರೂಪದಲಿ ಸಜ್ಜನರೊಳಗೆ ಮನದರ್ಪಣದಿ ತಾ ನಿಶ್ಚಲ ನಿರಾಮಯ ನಿರ್ವಿಕಾರ ನಿರಾಶ್ರಯಾನಂತ||4|| ಈ ಶರೀರ ಚತುಷ್ಟಯಗಳು ಕೋಶ ಧಾತುಗ ಭಾರತಿಪ ಪ್ರಾಣೇಶನು ಇಪ್ಪತ್ತೊಂದು ಸಾವಿರದ ಆರುನೂರೆನಿಪ ಶ್ವಾಸ ರೂಪಕ ಹಂಸ ಭಾಸ್ಕರ ಭೇಶರೊಳಗಿದ್ದು ಅವರ ಕೈವಿಡಿದು ಈ ಸರೋಜ ಭವಾಂಡದೊಳು ಸರ್ವತ್ರ ತುಂಬಿಹನು||5|| ಶಿರಗಳೈದು ಐದೆರೆಡು ಬಾಹುಗಳು ಎರಡು ಪಾದಗಳು ಒಂದು ಮಧ್ಯ ಉದರದಿ ಶೋಭಿಪ ವಾಕ್ಮನೋಮಯನೆನಿಸಿ ನಿತ್ಯದಲಿ ಕರಣ ಧಾತುಗಳಲ್ಲಿ ಎಪ್ಪತ್ತೆರಡು ಸಾವಿರ ನಾಡಿಗಳಲಿ ಇಪ್ಪ ಅರವಿದೂರನು ಭಾರತ ಪ್ರತಿಪಾದ್ಯನು ಎನಿಸಿ||6|| ಈರೆರೆಡು ದೇಹ ಊರ್ಮಿ ಭೂತಗಳಾರು ಅಧಿಕ ದಶ ಋಗ್ವಿನುತ ಲಕ್ಷ್ಮೀರಮಣ ವಿಷ್ಣ್ವಾಖ್ಯ ರೂಪದಿ ಚತು ಷಷ್ಠಿ ಕಲಾಧಾರಕನು ತಾನಾಗಿ ಬ್ರಹ್ಮಪುರಾರಿ ಮುಖ್ಯರೊಳಿದ್ದು ಸತತ ವಿಹಾರ ಮಾಳ್ಪನು ಚತುಷ್ಪಾದ ಆಹ್ವಯದಿ ಲೋಕದೊಳು||7|| ತೃಣ ಮೊದಲು ಬ್ರಹ್ಮ ಅಂತ ಜೀವರ ತನುಗಳ ತ್ರಯಗಳಲಿ ನಾರಾಯಣನ ಸಾವಿರದೈನೂರಿಪ್ಪತ್ತು ಮೇಲೆ ಆರು ಗಣನೆ ಮಾಳ್ಪುದು ಬುಧರು ರೂಪವ ಘ್ರುಣಿ ಸೂರ್ಯ ಆದಿತ್ಯ ನಾಮಗಳು ಅನುದಿನದಿ ಜಪಿಸುವರಿಗೆ ಈವ ಆರೋಗ್ಯ ಸಂಪದವ||8|| ಐದು ನೂರು ಎಪ್ಪತ್ತು ನಾಲ್ಕು ಅಧಿಭೌತಿಕದಲಿ ತಿಳಿವುದು ಐದೆರೆಡು ಶತ ಏಕ ವಿಂಶತಿ ರೂಪವು ಆಧ್ಯಾತ್ಮ ಭೇದಗಳು ಇನ್ನೂರು ಮೂವತ್ತಾದ ಮೇಲೆ ಒಂದಧಿಕ ಮೂರ್ತಿಗಳು ಆದರದಲಿ ಅಧಿದೈವದೊಳು ಚಿಂತಿಪುದು ಭೂಸುರರು||9|| ಸುರುಚಿ ಶಾರ್ವರೀಕರನು ಎನಿಸಿ ಸಂಕರುಷಣ ಪ್ರದ್ಯುಮ್ನ ಶಶಿ ಭಾಸ್ಕರರೊಳಗೆ ಅರವತ್ತಧಿಕ ಮುನ್ನೂರು ರೂಪದಲಿ ಕರೆಸಿಕೊಂಬನು ಅಹಃ ಸಂವತ್ಸರನೆನಿಪನು ವಿಶಿಷ್ಟ ನಾಮದಲಿ ಅರಿತವರಿಗೆ ಆರೋಗ್ಯ ಭಾಗ್ಯವನು ಈವ ಆನಂದಮಯ||10|| ಏಕ ಪಂಚಾಶತ್ ವರಣ ಗತ ಮಾಕಳತ್ರನು ಸರ್ವರೊಳಗ ಅವ್ಯಾಕೃತ ಆಕಾಶಾಂತ ವ್ಯಾಪಿಸಿ ನಿಗಮತತಿಗಳು ವ್ಯಾಕರಣ ಭಾರತ ಮುಖಾದಿ ಅನೇಕ ಶಾಸ್ತ್ರ ಪುರಾಣ ಭಾಷ್ಯ ಅನೀಕಗಳ ಕಲ್ಪಿಸಿ ಮನೋ ವಾಙ್ಮಯನೆನಿಸಿಕೊಂಬ||11|| ಭಾರಭೃತ್ ನಾಮಕನ ಸಾವಿರದ ಆರುನೂರ ಇಪ್ಪತ್ತನಾಲ್ಕು ಮೂರುತಿಗಳು ಚರಾಚರದಿ ಸರ್ವತ್ರ ತುಂಬಿಹವು ಆರು ನಾಲ್ಕು ಜಡಗಳಲಿ ಹದಿನಾರು ಚೇತನಗಳಲಿ ಚಿಂತಿಸೆ ತೋರಿಕೊಂಬನು ತನ್ನ ರೂಪವ ಸಕಲ ಟಾವಿನಲಿ||12|| ಮಿಸುಣಿ ಮೇಲಿಹ ಮಣಿಯವೊಳ್ ರಾಜಿಸುವ ಬ್ರಹ್ಮಾದಿಗಳ ಮನದಲಿ ಬಿಸಿಜಜಾಂಡ ಅಧಾರಕನು ಅಧೇಯನೆಂದೆನಿಸಿ ದ್ವಿಶತ ನಾಲ್ವತ್ತೆರಡು ರೂಪದಿ ಶಶಿಯೊಳು ಇಪ್ಪನು ಶಶದೊಳಗೆ ಶೋಭಿಸುವ ನಾಲ್ವತ್ತೆರಡು ಅಧಿಕ ಶತ ರೂಪದಲಿ ಬಿಡದೆ||13|| ಎರಡು ಸಾವಿರದ ಎಂಟು ರೂಪವನರಿತು ಸರ್ವ ಪದಾರ್ಥದಲಿ ಶ್ರೀ ವರನ ಪೂಜೆಯ ಮಾಡು ವಾರಗಳ ಬೇಡು ಕೊಂಡಾಡು ಬರಿದೆ ಜಲದೊಳು ಮುಳುಗಿ ಬಿಸಿಲೊಳು ಬೆರಳನು ಎಣಿಸಿದರೇನು ಸದ್ಗುರು ಹಿರಿಯರ ಅನುಸರಿಸಿ ಇದರ ಮರ್ಮವನ್ನು ಅರಿಯದಿಹ ನರನು||14|| ಮತ್ತೆ ಚಿತ್ದೇಹದೊಳಗೆ ಎಂಭತ್ತು ಸಾವಿರದ ಏಳು ನೂರ ಇಪ್ಪತ್ತೈದು ನರಸಿಂಹ ರೂಪದಲಿದ್ದು ಜೀವರಿಗೆ ನಿತ್ಯದಲಿ ಹಗಲು ಇರಲು ಬಪ್ಪ ಅಪಮೃತ್ಯುವಿಗೆ ತಾ ಮೃತ್ಯುವೆನಿಸುವ ಭೃತ್ಯ ವಾತ್ಸಲ ಭಯವಿನಾಶನ ಭಾಗ್ಯ ಸಂಪನ್ನ||15|| ಜ್ವರನೊಳು ಇಪ್ಪತ್ತೇಳು ಹರನೊಳಗೆ ಇರುವನು ಇಪ್ಪತ್ತೆಂಟು ರೂಪದಿ ಎರಡು ಸಾವಿರದ ಎಂಟು ನೂರಿಪ್ಪತ್ತೇಳು ಅಧಿಕ ಜ್ವರಹರ ಆಹ್ವಯ ನಾರಸಿಂಹನ ಸ್ಮರಣೆಮಾತ್ರದಿ ದುರಿತ ರಾಶಿಗಳು ಇರದೇ ಪೋಪವು ತರಣಿ ಬಿಂಬವ ಕಂಡ ಹಿಮದಂತೆ||16|| ಮಾಸ ಪರಿಯಂತರವು ಬಿಡದೆ ನೃಕೇಸರಿಯ ಶುಭನಾಮ ಮಂತ್ರ ಜಿತಾಸನದಲಿ ಏಕಾಗ್ರ ಚಿತ್ತದಿ ನಿಷ್ಕಪಟದಿಂದ ಬೇಸರದೆ ಜಪಿಸಲು ವೃಜಿನಗಳ ನಾಶಗೈಸಿ ಮನೋರಥಗಳ ಪರೇಶ ಪಾರ್ಟಿಯ ಮಾಡಿ ಕೊಡುವನು ಕಡೆಗೆ ಪರಗತಿಯ||17|| ಚತುರ ಮೂರ್ತ್ಯಾತ್ಮಕ ಹರಿಯು ತ್ರಿಂಶತಿ ಸುರೂಪದಿ ಬ್ರಹ್ಮನೊಳು ಮಾರುತನೊಳು ಇಪ್ಪತ್ತೇಳು ರೂಪದೊಳು ಇಪ್ಪ ಪ್ರದ್ಯುಮ್ನ ಸುತರೊಳು ಇಪ್ಪತ್ತೈದು ಹದಿನೆಂಟು ಅತುಳ ರೂಪಗಳ ಅರಿತು ವತ್ಸರ ಶತಗಳಲಿ ಪೂಜಿಸುತಲಿರು ಚತುರಾತ್ಮಕನ ಪದವ||18|| ನೂರು ವರುಷಕೆ ದಿವಸ ಮೂವತ್ತಾರು ಸಾವಿರ ವಹವು ನಾಡಿ ಶರೀರದೊಳಗೆ ಇನಿತು ಇಹವು ಸ್ತ್ರೀಪುಂಭೇದದಲಿ ಹರಿಯ ಈರಧಿಕ ಎಪ್ಪತ್ತು ಸಾವಿರ ಮೂರುತಿಗಳನೆ ನೆನೆದು ಸರ್ವಾಧಾರಕನ ಸರ್ವತ್ರ ಪೂಜಿಸು ಪೂರ್ಣನೆಂದರಿದು||19|| ಕಾಲಕರ್ಮಗುಣ ಸ್ವಭಾವಗಳ ಆಲಯನು ತಾನಾಗಿ ಲಕ್ಷ್ಮೀಲೋಲ ತತ್ತದ್ರೂಪ ನಾಮಡಿ ಕರೆಸುತ ಒಳಗಿದ್ದು ಲೀಲೆಯಿಂದಲಿ ಸರ್ವಜೀವರ ಪಾಲಿಸುವ ಸಂಹರಿಪ ಸೃಷ್ಟಿಪ ಮೂಲ ಕಾರಣ ಪ್ರಕೃತಿ ಗುಣ ಕಾರ್ಯಗಳ ಮನೆಮಾಡಿ||20|| ತಿಲಜವರ್ತಿಗಳ ಅನುಸರಿಸಿ ಪ್ರಜ್ವಲಿಸಿ ದೀಪಗಳು ಆಲಯದ ಕತ್ತಲೆಯ ಭಂಗಿಸಿ ತದ್ಗತಾರ್ಥವ ತೋರುವಂದದಲಿ ಜಲರುಹೇಕ್ಷಣ ತನ್ನವರ ಮನದೊಳಗೆ ಭಕ್ತಿ ಜ್ಞಾನ ಕರ್ಮಕೆ ಒಲಿದು ಪೊಳೆವುತ ತೋರುವನು ಗುಣ ರೂಪ ಕ್ರಿಯೆಗಳನು||21|| ಆವ ದೇಹವ ಕೊಡಲಿ ಹರಿ ಮತ್ತಾವ ಲೋಕದೊಳು ಇಡಲಿ ತಾ ಮತ್ತಾವ ದೇಶದೊಳು ಇಡಲಿ ಆವಾವಸ್ಥೆಗಳು ಬರಲಿ ಈ ವಿಧದಿ ಜಡ ಚೇತನದೊಳು ಪರಾವರೇಶನ ರೂಪ ಗುಣಗಳ ಭಾವಿಸುತ ಸುಜ್ಞಾನ ಭಕುತಿಯ ಬೇಡು ಕೊಂಡಾಡು||22|| ಒಂದರೊಳಗೊಂದು ಬೆರದಿಹವು ಇಂದಿರೇಶನ ರೂಪಗಳ ಮನಬಂದ ತೆರದಲಿ ಚಿಂತಿಸಿದಕೆ ಅನುಮಾನವಿನಿತಿಲ್ಲ ಸಿಂಧು ರಾಜನೊಳು ಅಂಬರ ಆಲಯ ಬಂಧಿಸಲು ಪ್ರತಿ ತಂತುಗಳೊಳು ಉದಬಿಂದು ವ್ಯಾಪಿಸಿದಂತೆ ಇರುತಿಪ್ಪನು ಚರಾಚರದಿ||23|| ಒಂದು ರೂಪದೊಳು ಒಂದು ಅವಯವದೊಳು ಒಂದು ರೋಮದೊಳು ಒಂದು ದೇಶದಿ ಪೊಂದಿ ಇಪ್ಪವು ಅಜಾಂಡ ಅನಂತಾನಂತ ಕೋಟಿಗಳು ಹಿಂದೆ ಮಾರ್ಕಾಂಡೆಯ ಕಾಣನೆ ಒಂದು ರೂಪದಿ ಸೃಷ್ಟಿ ಪ್ರಳಯಗಳು ಇಂದಿರೇಶನೊಳು ಏನಿದು ಅಚ್ಚರಿ ಅಪ್ರಮೇಯ ಸದಾ||24|| ಒಂದು ಅನಂತಾನಂತ ರೂಪಗಳು ಒಂದೇ ರೂಪದೊಳು ಇಹವು ಲೋಕಗಳು ಒಂದೇ ರೂಪದಿ ಸೃಷ್ಟಿ ಸ್ಥಿತಿ ಮೊದಲಾದ ವ್ಯಾಪಾರ ಒಂದೇ ಕಾಲಡಿ ಮಾಡಿ ತಿಳಿಸದೆ ಸಂದಣಿಸಿ ಕೊಂಡಿಪ್ಪ ಜಗದೊಳು ನಂದ ನಂದನ ರಣದೊಳು ಇಂದ್ರ ಆತ್ಮಜಗೆ ತೋರಿಸನೆ||25|| ಶ್ರೀರಮೇಶನ ಮೂರ್ತಿಗಳು ನವ ನಾರಿ ಕುಂಜರದಂತೆ ಏಕಾಕಾರ ತೋರ್ಪವು ಅವಯವಾಹ್ವಾಯ ಅವಯಗಳಲ್ಲಿ ಬೇರೆಬೇರೆ ಕಂಗೊಳಿಸುವ ಶರೀರದೊಳು ನಾನಾ ಪ್ರಕಾರ ವಿಕಾರಶೂನ್ಯ ವಿರಾಟನೆನಿಸುವ ಪದುಮಜಾಂಡದೊಳು||26|| ವಾರಿಜಭವಾಂಡದೊಳು ಲಕ್ಷ್ಮೀನಾರಸಿಂಹನ ರೂಪಗುಣಗಳು ವಾರಿಧಿಯೊಳಿಹ ತೆರಗಳಂದದಿ ಸಂದಣಿಸಿ ಇಹವು ಕಾರಣಾoಶಾವೇಶ ವ್ಯಾಪ್ತಾವತಾರ ಕಾರ್ಯಾವ್ಯಕ್ತವ್ಯಕ್ತವು ಈರೈದು ವಿಭೂತಿ ಅಂತರ್ಯಾಮಿ ರೂಪಗಳು||27|| ಮಣಿಗಳೊಳಗಿಹ ಸೂತ್ರದಂದದಿ ಪ್ರಣವ ಪಾದ್ಯನು ಚೇತನಾಚೇತನ ಜಗತ್ತಿನೊಳು ಅನುದಿನದಲು ಆಡುವನು ಸುಖಪೂರ್ಣ ದಣಿವಿಕೆಯು ಇವಗಿಲ್ಲ ಬಹು ಕಾರುಣಿಕ ಅನಂತಾನಂತ ಜೀವರ ಗಣದೊಳು ಏಕಾಂಶ ಅಂಶ ರೂಪದಿ ನಿಂತು ನೇಮಿಸುವ||28|| ಜೀವ ಜೀವರ ಭೇದ ಜಡ ಜಡ ಜೀವ ಜಡ ಜಡ ಜೀವರಿಂದಲಿ ಶ್ರೀವರನು ಅತ್ಯಂತ ಭಿನ್ನ ವಿಲಕ್ಷಣನು ಲಕ್ಷ್ಮೀ ಮೂವರಿಂದಲಿ ಪದ್ಮಜಾಂದದಿ ತಾ ವಿಲಕ್ಷಣಳು ಎನಿಸುತಿಪ್ಪಳು ಸಾ ಅಧಿಕಸಮ ಶೂನ್ಯಳು ಎಂದರಿತು ಈರ್ವರನು ಭಜಿಸು||29|| ಆದಿತೇಯರು ತಿಳಿಯದಿಹ ಗುಣ ವೇದಮಾನಿಗಳು ಎಂದೆನಿಪ ವಾಣಿ ಆದಿಗಳು ಬಲ್ಲರು ಅವರು ಅರಿಯದ ಗುಣಂಗಳನು ವೇಧ ಬಲ್ಲನು ಬೊಮ್ಮನು ಅರಿಯದ ಅಗಾಧ ಗುಣಗಳು ಲಕುಮಿ ಬಲ್ಲಳು ಶ್ರೀಧರ ಒಬ್ಬನು ಉಪಾಸ್ಯ ಸದ್ಗುಣಪೂರ್ಣ ಹರಿಯೆಂದು||30|| ಇಂತ ಅನಂತಾನಂತ ಗುಣಗಳ ಪ್ರಾಂತಗಾಣದೆ ಮಹಾಲಕುಮಿ ಭಗವಂತಗೆ ಆಭರಣ ಆಯುಧ ಅಂಬರ ಆಲಯಗಳಾಗಿ ಸ್ವಾಂತದಲಿ ನೆಲೆಗೊಳಿಸಿ ಪರಮ ದುರಂತ ಮಹಿಮನ ದೌತ್ಯಕರ್ಮ ನಿರಂತರದಿ ಮಾಡುತಲಿ ತದಧೀನತ್ವಯೈದಿಹಳು||31|| ಪ್ರಳಯ ಜಲಧಿಯೊಳು ಉಳ್ಳ ನಾವೆಯು ಹೊಲಬುಗಾಣದೆ ಸುತ್ತುವಂದದಿ ಜಲರುಹೇಕ್ಷಣನ ಅಮಲ ಗುಣರೂಪಗಳ ಚಿಂತಿಸುತ ನೆಲೆಯಗಾಣದೆ ಮಹಾಲಕುಮಿ ಚಂಚಲವನು ಐದಿಹಳು ಅಲ್ಪ ಜೀವರಿಗೆ ಅಳವಡುವದೇನು ಇವನ ಮಹಿಮೆಗಳು ಈ ಜಗತ್ರಯದಿ||32|| ಶ್ರೀನಿಕೇತನ ಸಾತ್ವತಾಂಪತಿ ಜ್ಞಾನ ಗಮ್ಯ ಗಯಾಸುರ ಅರ್ದನ ಮೌನಿಕುಲ ಸನ್ಮಾನ್ಯ ಮಾನದ ಮಾತುಳ ದ್ವ್ಹಂಸಿ ದೀನಜನ ಮಂದಾರ ಮಧುರಿಪು ಪ್ರಾಣದ ಜಗನ್ನಾಥ ವಿಠಲ ತಾನೇ ಗತಿಯೆಂದು ಅನುದಿನದಿ ನಂಬಿದವರ ಪೊರೆವ||33||

Bannanje Govindacharya
Rs.238.00

B.N.K Sharma
Rs.1100.00

B.N.K Sharma
Rs.1445.00
*As an Amazon Associate, we earn from qualifying purchases
Advertisement
Banner Ad Space (728x90)