ವರ್ಣ ಪ್ರಕ್ರಿಯ ಸಂಧಿ
31 verses
ಉದಾತ್ತ, ಅನುದಾತ್ತ ಮತ್ತು ಸ್ವರಿತ ಸ್ವರಗಳ ಮಹತ್ವ. ಜೀವ ಪ್ರಕರಣದ ತತ್ವ ಜ್ಞಾನ. ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು|| ಹರಿಯೆ ಪಂಚಾಶದ್ವರ್ಣ ಸುಸ್ವರವು ಉದಾತ್ತಾನುದಾತ್ತ ಪ್ರಚಯ ಸ್ವರಿತ ಸಂಧಿ ವಿಸರ್ಗ ಬಿಂದುಗಳೊಳಗೆ ತದ್ವಾಚ್ಯ ಇರುವ ತನ್ನಾಮ ರೂಪಗಳರಿತು ಉಪಾಸನೆಗೈವರು ಇಳೆಯೊಳು ಸುರರೆ ಸರಿ ನರರಲ್ಲ ಅವರು ಆಡುವುದೇ ವೇದಾರ್ಥ||1|| ಈಶನಲಿ ವಿಜ್ಞಾನ ಭಗವದ್ದಾಸರಲಿ ಸದ್ಭಕ್ತಿ ವಿಷಯ ನಿರಾಶೆ ಮಿಥ್ಯಾ ವಾದದಲಿ ಪ್ರದ್ವೇಷ ನಿತ್ಯದಲಿ ಈ ಸಮಸ್ತ ಪ್ರಾಣಿಗಳಲಿ ರಮೇಶನು ಇಹನೆಂದು ಅರಿದು ಅವರ ಅಭಿಲಾಷೆಗಳ ಪೂರೈಸುವುದೆ ಮಹಾಯಜ್ಞೆ ಹರಿಪೂಜೆ||2|| ತ್ರಿದಶ ಏಕಾತ್ಮಕನು ಎನಿಸಿ ಭೂ ಉದಕ ಶಿಖಿಯೊಳು ಹತ್ತು ಕರಣದಿ ಅಧಿಪರು ಎನಿಸುವ ಮುಖ್ಯ ಪ್ರಾಣ ಆದಿತ್ಯರೊಳು ನೆಲೆಸಿ ವಿದಿತನಾಗಿದ್ದು ಅನವರತ ನಿರವಧಿಕ ಮಹಿಮನು ಸಕಲ ವಿಷಯವ ನಿಧನ ನಾಮಕ ಸಂಕರುಷಣ ಅಹ್ವಯನು ಸ್ವೀಕರಿಪ||3|| ದೈಹಿಕ ದೈಶಿಕ ಕಾಲಿಕತ್ರಯ ಗಹನ ಕರ್ಮಗಳುಂಟು ಇದರೊಳು ವಿಹಿತ ಕರ್ಮಗಳರಿತು ನಿಷ್ಕಾಮಕನು ನೀನಾಗಿ ಬೃಹತಿ ನಾಮಕ ಭಾರತೀಶನ ಮಹಿತರೂಪವ ನೆನೆದು ಮನದಲಿ ಅಹರ್ ಅಹರ್ ಭಗವಂತಗರ್ಪಿಸು ಪರಮ ಭಕುತಿಯಲಿ||4|| ಮೂರುವಿಧ ಕರ್ಮಗಳ ಒಳಗೆ ಕಂಸಾರಿ ಭಾರ್ಗವ ಹಯವದನ ಸಂಪ್ರೇರಕನು ತಾನಾಗಿ ನವರೂಪಂಗಳನು ಧರಿಸಿ ಸೂರಿ ಮಾನವ ದಾನವರೊಳು ವಿಕಾರ ಶೂನ್ಯನು ಮಾಡಿ ಮಾಡಿಸಿ ಸಾರಭೋಕ್ತನು ಸ್ವೀಕರಿಸಿ ಕೊಡುತ ಇಪ್ಪ ಜೀವರಿಗೆ||5|| ಅನಳ ಪಕ್ವವ ಗೈಸಿದ ಅನ್ನವ ಅನಳನೊಳು ಹೋಮಿಸುವ ತೆರದಂತೆ ಅನಿಮಿಶೇಷನು ಮಾಡಿ ಮಾಡಿಸಿದಖಿಳ ಕರ್ಮಗಳ ಮನವಚನ ಕಾಯದಲಿ ತಿಳಿದು ಅನುದಿನದಿ ಕೊಡು ಶಂಕಿಸದೆ ವೃಜಿನ ಅರ್ದನ ಸದಾ ಕೈಕೊಂಡು ಸಂತೈಸುವನು ತನ್ನವರ||6|| ಕುದುರೆ ಬಾಲದ ಕೊನೆಯ ಕೂದಲು ತುದಿ ವಿಭಾಗವ ಮಾಡಿ ಶತವಿಧವು ಅದರೊಳೊಂದನು ನೂರು ಭಾಗವ ಮಾಡಲು ಎಂತಿಹುದೋ ವಿಧಿ ಭವಾದಿ ಸಮಸ್ತ ದಿವಿಜರ ಮೊದಲು ಮಾಡಿ ತೃಣಾಂತ ಜೀವರೊಳಧಿಕ ನ್ಯೂನತೆಯಿಲ್ಲವು ಎಂದಿಗೂ ಜೀವ ಪರಮಾಣು||7|| ಜೀವನ ಅಂಗುಷ್ಠ ಆಗ್ರಾ ಮೂರುತಿ ಜೀವನ ಅಂಗುಟ ಮಾತ್ರ ಮೂರುತಿ ಜೀವನ ಪ್ರಾದೇಶ ಜೀವಾಕಾರ ಮೂರ್ತಿಗಳು ಎವಮಾದಿ ಅನಂತ ರೂಪದಿ ಯಾವತ್ ಅವಯವಗಳೊಳು ವ್ಯಾಪಿಸಿ ಕಾವ ಕರುಣಾಳುಗಳ ದೇವನು ಈ ಜಗತ್ರಯವ||8|| ಬಿಂಬ ಜೀವ ಅಂಗುಷ್ಠ ಮಾತ್ರದಿ ಇಂಬುಗೊಂಡಿಹ ಸರ್ವರೊಳು ಸೂಕ್ಷ್ಮ ಅಂಬರದಿ ಹೃತ್ಕಮಲ ಮಧ್ಯ ನಿವಾಸಿಯೆಂದೆನಿಸಿ ಎಂಬರು ಈತಗೆ ಕೋವಿದರು ವಿಶ್ವಂಭರಾತ್ಮಕ ಪ್ರಾಜ್ಞ ಭಟಕ ಕುಟುಂಬಿ ಸಂತೈಸುವನು ಈ ಪರಿ ಬಲ್ಲ ಭಜಕರನು||9|| ಪುರುಷನಾಮಕ ಸರ್ವ ಜೀವರೊಳಿರುವ ದೇಹ ಆಕಾರ ರೂಪದಿ ಕರುಣ ನಿಯಾಮಕ ಹೃಷೀಕಪನು ಇಂದ್ರಿಯಂಗಳಲಿ ತುರಿಯ ನಾಮಕ ವಿಶ್ವ ತಾ ಹನ್ನೆರಡು ಬೆರಳುಳಿದು ಉತ್ತಮಾಂಗದಿ ಎರಡಧಿಕ ಎಪ್ಪತ್ತು ಸಾವರಿಯಾ ನಾಡಿಯೊಳಗಿಪ್ಪ||10|| ವ್ಯಾಪಕನು ತಾನಾಗಿ ಜೀವ ಸ್ವರೂಪ ದೇಹದ ಒಳಹೊರಗೆ ನಿರ್ಲೇಪನು ಆಗಿಹ ಜೀವಕೃತ ಕರ್ಮಗಳನು ಆಚರಿಸಿ ಶ್ರೀ ಪಯೋಜಭವ ಈರರಿಂದ ಪ್ರದೀಪವರ್ಣ ಸ್ವಮೂರ್ತಿ ಮಧ್ಯಗ ತಾ ಪೊಳೆವ ವಿಶ್ವಾದಿ ರೂಪದಿ ಸೇವೆ ಕೈಕೊಳುತ||11|| ಗರುಡ ಶೇಷ ಭವಾದಿ ನಾಮವ ಧರಿಸಿ ಪವನ ಸ್ವರೂಪ ದೇಹದಿ ಕರಣ ನಿಯಾಮಕನು ತಾನಾಗಿಪ್ಪ ಹರಿಯಂತೆ ಸರಸಿಜಾಸನ ವಾಣಿ ಭಾರತಿ ಭರತನಿಂದ ಒಡಗೂಡಿ ಲಿಂಗದಿ ಇರುತಿಹನು ಮಿಕ್ಕ ಆದಿತೇಯರಿಗೆ ಇಲ್ಲವು ಆಸ್ಥಾನ||12|| ಜೀವನಕೆ ತುಷದಂತೆ ಲಿಂಗವು ಸಾವಕಾಶದಿ ಪೊಂದಿ ಸುತ್ತಲು ಪ್ರಾವರಣ ರೂಪದಲಿ ಇಪ್ಪುದು ಭಗವದಿಚ್ಚೆಯಲಿ ಕೇವಲ ಜಡ ಪ್ರಕೃತಿಯಿದಕೆ ಅಧಿದೇವತೆಯು ಮಹಾಲಕುಮಿಯೆನಿಪಳು ಆ ವಿರಜೆಯ ಸ್ನಾನ ಪರಿಯಂತರದಿ ಹತ್ತಿಹುದು||13|| ಆರಧಿಕ ದಶಕಳೆಗಳು ಉಳ್ಳ ಶರೀರವು ಅನಿರುದ್ಧಗಳ ಮಧ್ಯದಿ ಸೇರಿ ಇಪ್ಪದು ಜೀವ ಪರಮಾಚ್ಚಾದಿಕ ದ್ವಯವು ಬಾರದಂದದಿ ದಾನವರನು ಅತಿ ದೂರಗೈಸುತ ಶ್ರೀಜನಾರ್ಧನ ಮೂರು ಗುಣದೊಳಗಿಪ್ಪನು ಎಂದಿಗು ತ್ರಿವೃತುಯೆಂದೆನಿಸಿ||14|| ರುದ್ರ ಮೊದಲಾದ ಅಮರರಿಗೆ ಅನಿರುದ್ಧ ದೇಹವೆ ಮನೆಯೆನಿಸುವುದು ಇದ್ದು ಕೆಲಸವ ಮಾಡರು ಅಲ್ಲಿಂದ ಇತ್ತ ಸ್ಥೂಲದಲಿ ಕ್ರುದ್ಧ ಅಖಿಲ ದಿವಿಜರು ಪರಸ್ಪರ ಸ್ಪರ್ಧೆಯಿಂದಲಿ ದ್ವಂದ್ವ ಕರ್ಮ ಸಮೃದ್ಧಿಗಳನು ಆಚರಿಸುವರು ಪ್ರಾಣೇಶನ ಆಜ್ಞೆಯಲಿ||15|| ಮಹಿಯೊಳಗೆ ಸುಕ್ಷೇತ್ರ ತೀರ್ಥವು ತುಹಿನ ವರುಷ ವಸಂತಕಾಲದಿ ದಹಿಕ ದೈಶಿಕ ಕಾಲಿಕ ತ್ರಯ ಧರ್ಮಕರ್ಮಗಳ ದ್ರುಹಿಣ ಮೊದಲಾದ ಅಮರರು ಎಲ್ಲರ ವಹಿಸಿಸ್ ಗುಣಗಳನು ಅನುಸರಿಸಿ ಸನ್ನಿಹಿತರು ಆಗಿದ್ದು ಎಲ್ಲರೊಳು ಮಾಡುವರು ವ್ಯಾಪಾರ||16|| ಕೇಶ ಸಾಸಿರ ವಿಧ ವಿಭಾಗವಗೈಸಲು ಎನತು ಅನಿತಿಹ ಸುಷುಮ್ನವು ಆ ಶಿರಾಂತದಿ ವ್ಯಾಪಿಸಿಹುದು ಈ ದೇಹಮಧ್ಯದಲಿ ಆ ಸುಷುಮ್ನಕೆ ವಜ್ರಕಾರ್ಯ ಪ್ರಕಾಶಿನೀ ವೈದ್ಯುತಿಗಳಿಹವು ಪ್ರದೇಶದಲಿ ಪಶ್ಚಿಮಕೆ ಉತ್ತರ ಪೂರ್ವ ದಕ್ಷಿಣಕೆ||17|| ಆ ನಳಿನ ಭವ ನಾಡಿಯೊಳಗೆ ತ್ರಿಕೋಣ ಚಕ್ರವು ಇಪ್ಪುದು ಅಲ್ಲಿ ಕೃಶಾನು ಮಂಡಲ ಮಧ್ಯಗನು ಸಂಕರುಷಣ ಆಹ್ವಯನು ಹೀನ ಪಾಪಾತ್ಮಕ ಪುರುಷನ ದಹಾನ ಗೈಸುತ ದಿನದಿನದಿ ವಿಜ್ಞಾನಮಯ ಶ್ರೀವಾಸುದೇವನ ಐದಿಸುವ ಕರುಣಿ||18|| ಮಧ್ಯ ನಾಡಿಯ ಮಧ್ಯದಲಿ ಹೃತ್ಪದ್ಮ ಮೂಲದಿ ಮೂಲಪತಿ ಪದಪದ್ಮ ಮೂಲದಲಿ ಇಪ್ಪ ಪವನನ ಪಾದಮೂಲದಲಿ ಹೊಂದಿಕೊಂಡಿಹ ಜೀವ ಲಿಂಗಾನಿರುದ್ಧ ದೇಹ ವಿಶಿಷ್ಟನಾಗಿ ಕಪರ್ದಿ ಮೊದಲಾದ ಅಮರರು ಎಲ್ಲರು ಕಾದುಕೊಂಡಿಹರು||19|| ನಾಳ ಮಧ್ಯದಲಿ ಇಪ್ಪ ಹೃತ್ಕೀಲಾಲಜದೊಳಿಪ್ಪ ಅಷ್ಟದಳದಿ ಕುಲಾಲ ಚಕ್ರದ ತೆರದಿ ಚರಿಸುತ ಹಂಸನಾಮಕನು ಕಾಲ ಕಾಲಗಳಲ್ಲಿ ಯೆಣ್ದೆಸೆ ಪಾಲಕರ ಕೈಸೇವೆಗೊಳುತ ಕೃಪಾಳು ಅವರಭಿಲಾಷೆಗಳ ಪೂರೈಸಿ ಕೊಡುತಿಪ್ಪ||20|| ವಾಸವಾನುಜ ರೇಣುಕಾತ್ಮಜ ದಾಶರಥಿ ವೃಜಿನ ಅರ್ದನ ಅಮಲ ಜಲಾಶಯ ಆಲಯ ಹಯವದನ ಶ್ರೀಕಪಿಲ ನರಸಿಂಹ ಈ ಸುರೂಪದಿ ಅವರವರ ಸಂತೋಷ ಬಡಿಸುತ ನಿತ್ಯ ಸುಖಮಯ ವಾಸವಾಗಿಹ ಹೃತ್ಕಮಲದೊಳು ಬಿಂಬನು ಎಂದೆನಿಸಿ||21|| ಸುರಪನ ಆಲಯಕೆ ಐದಿದರೆ ಮನವು ಎರಗುವುದು ಸತ್ಪುಣ್ಯ ಮಾರ್ಗದಿ ಬರಲು ವಹ್ನಿಯ ಮನೆಗೆ ನಿದ್ರೆ ಆಲಸ್ಯ ಹಸಿ ತೃಷೆಯು ತರಣಿ ತನಯ ನಿಕೇತನದಿ ಸಂಭರಿತ ಕೋಪಾಟೋಪ ತೋರುವುದು ಅರವಿದೂರನು ನಿರ್ಋತಿಯಲಿರೆ ಪಾಪಗಳ ಮಾಳ್ಪ||22|| ವರುಣನಲ್ಲಿ ವಿನೋದ ಹಾಸ್ಯವು ಮರುತನೊಳು ಗಮನಾಗಮನ ಹಿಮಕರ ಧನಾಧಿಪರಲ್ಲಿ ಧರ್ಮದ ಜನಿಸುವುದು ಹರನ ಮಂದಿರದಲ್ಲಿ ಗೋ ಧನ ಧರಣಿ ಕನ್ಯಾದಾನಗಳು ಒಂದರಘಳಿಗೆ ತಡೆಯದಲೇ ಕೊಡುತಿಹ ಚಿತ್ತ ಪುಟ್ಟುವುದು||23|| ಹೃದಯದೊಳಗೆ ವಿರಕ್ತಿ ಕೇಸರಕೆ ಒದಗೆ ಸ್ವಪ್ನ ಸುಷುಪ್ತಿ ಲಿಂಗದಿ ಮಧುಹ ಕರ್ಣಿಕೆಯಲ್ಲಿ ಬಾರೆ ಜಾಗ್ರತೆಯು ಪುಟ್ಟುವುದು ಸುದರುಶನ ಮೊದಲಾದ ಅಷ್ಟ ಆಯುಧವ ಪಿಡಿದು ದಿಶಾಧಿಪತಿಗಳ ಸದನದಲಿ ಸಂಚರಿಸುತ ಈಪರಿ ಬುದ್ಧಿಗಳ ಕೊಡುವ||24|| ಸೂತ್ರನಾಮಕ ಪ್ರಾಣಪತಿ ಗಾಯತ್ರಿ ಸಂಪ್ರತಿಪಾದ್ಯನು ಆಗಿ ಈ ಗಾತ್ರದೊಳು ನೆಲೆಸಿರಲು ತಿಳಿಯದೆ ಕಂಡ ಕಂಡಲ್ಲಿ ಧಾತ್ರಿಯೊಳು ಸಂಚರಿಸಿ ಪುತ್ರ ಕಳತ್ರ ಸಹಿತ ಅನುದಿನದಿ ತೀರ್ಥಕ್ಷೇತ್ರ ಯಾತ್ರೆಯ ಮಾಡಿದೆವು ಎಂದೆನುತ ಹಿಗ್ಗುವರು||25|| ನಾರಸಿಂಹ ಸ್ವರೂಪದೊಳಗೆ ಶರೀರ ನಾಮದಿ ಕರೆಸುವನು ಹದಿನಾರು ಕಳೆಗಳು ಉಳ್ಳ ಲಿಂಗದಿ ಪುರುಷ ನಾಮಕನು ತೋರುವನು ಅನಿರುದ್ಧದೊಳು ಶಾಂತೀರಮಣ ಅನಿರುದ್ಧ ರೂಪದಿ ಪ್ರೇರಿಸುವ ಪ್ರದ್ಯುಮ್ನ ಸ್ಥೂಲ ಕಳೇವರದೊಳಿದ್ದು||26|| ಮೊದಲು ತ್ವಕ್ಚರ್ಮಗಳು ಮಾಂಸವು ರುಧಿರ ಮೇದೋ ಮಜ್ಜನವು ಅಸ್ಥಿಗಳು ಇದರೊಳಗೆ ಏಕ ಊನ ಪಂಚಾಶತ್ ಮರುದ್ಗಣವು ನಿಧನ ಹಿಂಕಾರಾದಿ ಸಾಮಗ ಅದರ ನಾಮದಿ ಕರೆಸುತ ಒಂಭತ್ತಧಿಕ ನಾಲ್ವತ್ತು ಎನಿಪ ರೂಪದಿ ಧಾತುಗಳೊಳಿಪ್ಪ||27|| ಸಪ್ತಧಾತುಗಳ ಒಳ ಹೊರಗೆ ಸಂತಪ್ತ ಲೋಹಗತ ಅಗ್ನಿಯಂದದಿ ಸಪ್ತ ಸಾಮಗನು ಇಪ್ಪ ಅನ್ನಮಯಾದಿ ಕೋಶದೊಳು ಲಿಪ್ತನಾಗದೆ ತತ್ತತ್ತಾಹ್ವಯ ಕ್ಲುಪ್ತಭೋಗವ ಕೊಡುತ ಸ್ವಪ್ನ ಸುಷುಪ್ತಿ ಜಾಗ್ರತೆಯೀವ ತೈಜಸ ಪ್ರಾಜ್ಞ ವಿಶ್ವಾಖ್ಯ||28|| ತೀವಿಕೊಂಡಿಹವು ಅಲ್ಲಿ ಮಜ್ಜ ಕಳೇವರದಿ ಅಂಗುಳಿಯ ಪರ್ವದ ಟಾವಿನಲಿ ಮುನ್ನೂರು ಅರವತ್ತು ಎನಿಪ ತ್ರಿಸ್ಥಳದಿ ಸಾವಿರದ ಎಂಭತ್ತು ರೂಪವ ಕೋವಿದರು ಪೇಳುವರು ದೇಹದಿ ದೇವತೆಗಳ ಒಡಗೂಡಿ ಕ್ರೀಡಿಸುವನು ರಮಾರಮಣ||29|| ಕೀಟ ಪೇಶಸ್ಕಾರ ನೆನವಿಲಿ ಕೀಟ ಭಾವವ ತೊರೆದು ತದ್ವತ್ ಖೇಟ ರೂಪವನು ಐದಿಯಾಡುವ ತೆರದಿ ಭಕುತಿಯಲಿ ಕೈಟಭಾರಿಯ ಧ್ಯಾನದಿಂದ ಭವಾಟವಿಯನು ಅತಿ ಶೀಘ್ರದಿಂದಲಿ ದಾಟಿ ಸಾರೂಪ್ಯವನು ಐದುವರು ಅಲ್ಪ ಜೀವಿಗಳು||30|| ಈ ಪರೀ ದೇಹದೊಳು ಭಗವದ್ರೂಪಗಳ ಮರೆಯದಲೆ ಮನದಿ ಪದೊಪದೇ ಭಕುತಿಯಲಿ ಸ್ಮರಿಸುತಲಿಪ್ಪ ಭಕುತರನಾ ಗೋಪತಿ ಜಗನ್ನಾಥ ವಿಠಲ ಸಮೀಪಗನು ತಾನಾಗಿ ಸಂತತ ಸಾಪರೋಕ್ಷಿಯ ಮಾಡಿ ಪೊರೆವನು ಎಲ್ಲ ಕಾಲದಲಿ||31||

Bannanje Govindacharya
Rs.238.00

B.N.K Sharma
Rs.1100.00

B.N.K Sharma
Rs.1445.00
*As an Amazon Associate, we earn from qualifying purchases
Advertisement
Banner Ad Space (728x90)